Monday, 16th December 2024

Tumkur News: ರಾ.ಹೆ. 544ಇ ಗೆ ಜಮೀನು ಕಳೆದು ಕೊಂಡ ರೈತರಿಗೆ 1 ಗುಂಟೆ 4 ಲಕ್ಷ ಪರಿಹಾರ ನೀಡಿ; ರವಿಕುಮಾರ್ ಒತ್ತಾಯ

ಕರ್ನಾಟಕ ಆಂದ್ರ ಗಡಿ ಭಾಗವಾದ ಗಿಡಗನಹಳ್ಳಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ

ಶಿರಾ: ಶಿರಾ ತಾಲೂಕು ಆಂದ್ರ ಗಡಿಭಾಗವಾದ ಕೆಂತರ್ಲಟ್ಟಿಯಿಂದ ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿ ೫೪೪ಇ ಹಾದುಹೋಗಿದ್ದು, ಈ ರಸ್ತೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸರ್ಕಾರ ೧ ಗುಂಟೆಗೆ ೪ ಲಕ್ಷ ಪರಿಹಾರ ನೀಡಬೇಕೆಂದು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ರೈತರಾದ ರವಿಕುಮಾರ್ ಒತ್ತಾಯಿಸಿದರು.

ಅವರು ಶನಿವಾರ ರೈತರ ಜಮೀನಿಗೆ ಸೂಕ್ತ ಪರಿಹಾರಕ್ಕಾಗಿ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಕರ್ನಾಟಕ ಅಂದ್ರ ಗಡಿ ರಸ್ತೆಯಾದ ಗಿಡಗನಹಳ್ಳಿ ಕ್ರಾಸ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ೫೪೪ಇ ರಸ್ತೆಗೆ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರವು ಕೆಲವರಿಗೆ ಪರಿಹಾರ ನೀಡಿದೆ. ಇನ್ನೂ ಕೆಲವರಿಗೆ ಪರಿಹಾರ ನೀಡಿಲ್ಲ.

ಶಿರಾ ಉಪನೊಂದಣಾಧಿಕಾರಿಗಳ ಕಚೇರಿಯ ದಾಖಲೆಯ ಪ್ರಕಾರ ಮದಲೂರು ಸರ್ವೇ ನಂಬರ್‌ಗೆ ಮಾರುಕಟ್ಟೆ ಮೌಲ್ಯ ೧ ಗುಂಟೆಗೆ ೯೮೭೦೦ ರೂಪಾಯಿ ಇದೆ. ಹಾಗೂ ನಗರಕ್ಕೆ ಸಮೀಪವಿರುವ ಕೊಟ್ಟ ಗ್ರಾಮದ ಸರ್ವೇ ನಂಬರ್‌ಗೆ ೧ ಗುಂಟೆಗೆ ೧.೦೭ ಲಕ್ಷ ಇದೆ. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಇರುವ ಮಾರುಕಟ್ಟೆ ಮೌಲ್ಯ ದಂತೆ ೧ ಗುಂಟೆಗೆ ೯೮೭೦೦ ರೂಪಾಯಿಯಂತೆ ನಾಲ್ಕು ಪಟ್ಟು ಪರಿಹಾರವಾಗಿ ೧ ಗುಂಟೆಗೆ ೪ ಲಕ್ಷ ರೂಗಳ ಪರಿಹಾರ, ಕೊಟ್ಟ ಸರ್ವೇ ನಂಬರ್‌ಗೆ ೧ ಗುಂಟೆಗೆ ೬ ಲಕ್ಷ ಪರಿಹಾರ ನೀಡಿ ಕಾಮಗಾರಿ ಮಾಡಬೇಕು. ಆದರೆ ಸರ್ಕಾರದವರು ೧ ಗುಂಟೆಗೆ ಕೇವಲ ೯೭೬೧ ರೂಪಾಯಿಗಳನ್ನು ನೀಡುತ್ತಿದೆ.

ಇದು ರೈತರಿಗೆ ಎಸಗುತ್ತಿರುವ ಅನ್ಯಾಯವಾಗಿದೆ. ಆದ್ದರಿಂದ ಉಪನೊಂದಣಾಧಿಕಾರಿಗಳ ಕಚೇರಿಯ ಮಾರುಕಟ್ಟೆ ಮೌಲ್ಯದಂತೆ ೧ ಗುಂಟೆಗೆ ೯೮೭೦೦ ರಂತೆ ೧ ಗುಂಟೆಗೆ ನಾಲ್ಕುಪಟ್ಟು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಡಿಸಿ ಕಚೇರಿ ಮುಂದೆ ಪ್ರತಿಭಟನೆ: ಶಿರಾ ತಾಲೂಕಿನ ಮದಲೂರು ಗ್ರಾ.ಪಂ, ಕೊಟ್ಟ, ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು ೧೨೦ ರೈತರ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿ ೫೪೪ಇ ಗೆ ಸ್ವಾಧೀನಪಡಿಸಿ ಕೊಂಡಿದ್ದಾರೆ. ಆದರೆ ರೈತರ ಜಮೀನಿಗೆ ಮಾರುಕಟ್ಟೆ ಮೌಲ್ಯದ ಅನುಸಾರ ಪರಿಹಾರ ನೀಡಿಲ್ಲ.

ಈ ಬಗ್ಗೆ ಈ ಭಾಗದ ರೈತರು ಹಲವಾರು ಭಾರಿ ಪ್ರತಿಭಟನೆ ಮಾಡಿದರೂ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದರೂ ಸಹ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಾಗಲಿ, ಜಿಲ್ಲಾಧಿಕಾರಿ ಗಳಾಗಲಿ, ತಹಶೀ ಲ್ದಾರ್ ಆಗಲಿ, ಶಾಸಕರಾಗಲಿ ಯಾರೂ ಸಹ ಬಂದು ರೈತರ ಸಮಸ್ಯೆ ಕೇಳಿಲ್ಲ.

ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕೇವಲ ಮತ ಕೇಳಲು ಬರುವ ರಾಜಕಾರಣಿಗಳು ರೈತರ ಸಮಸ್ಯೆ ಕೇಳು ಏಕೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮುಂದಿನ ಗುರುವಾರದೊಳಗೆ ರೈತರ ಸಮಸ್ಯೆ ಪರಿಹರಿಸ ದಿದ್ದರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.

ಜಮೀನು ಕಳೆದುಕೊಂಡು ರೈತ ನವೀನ್ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ೫೪೪ಇಗೆ ಹಲವಾರು ಸಣ್ಣ ಹಿಡುವಳಿ ದಾರರ ರೈತರ ಜಮೀನುಗಳೇ ಸ್ವಾಧೀನವಾಗಿರುವುದು. ಮದಲೂರು ಕೆರೆಗೆ ನೀರು ಬಂದಿರುವ ಕಾರಣ ಈ ಭಾಗದ ರೈತರು ಕೊಳವೆ ಬಾವಿಗಳನ್ನು ಕೊರೆಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಆದರೆ ಈಗ ಇರುವ ಜಮೀನನ್ನು ರಸ್ತೆಗೆ ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡುತ್ತಿಲ್ಲ.

ಸರ್ಕಾರ ನಿಗಧಿಪಡಿಸಿದ ಪರಿಹಾರ ಹಣವನ್ನು ಗುತ್ತಿಗೆದಾರರು, ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ. ರೈತರನ್ನು ಎದರಿಸಿ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ರೈತರ ಜಮೀನನ್ನು ವಶಪಡಿಸಿಕೊಂಡು ರೈತರ ಜೀವನಕ್ಕೂ ಕುತ್ತು ತಂದಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಬಂದು ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತರಾದ ಪ್ರಕಾಶ, ನಂದಕುಮಾರ್, ರಾಜಣ್ಣ, ನಾಗೇಂದ್ರ, ಶಿವಣ್ಣ ಗೌಡ, ಮುದ್ದಣ್ಣ, ಶಿರಾಜಪ್ಪ, ಚಂದ್ರಪ್ಪ, ಯಾದವೇಂದ್ರ ಸೇರಿದಂಗೆ ನೂರಾರು ರೈತರು ಭಾಗವಹಿಸಿದ್ದರು.