ತುಮಕೂರು: ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂಜಿನಿಯರ್‌ಗಳು ಸೇರಿದಂತೆ, ಎಲ್ಲಾ ವಲಯದ ಇಂಜಿನಿಯರ್‌ಗಳ ಜವಾಬ್ದಾರಿ ಮತ್ತು ರಕ್ಷಣೆಯ ದೃಷ್ಟಿಯಿಂದ ಕರ್ನಾಟಕ ಪ್ರೊಫೆಸನಲ್ ಸಿವಿಲ್ ಇಂಜಿನಿಯರ್ಸ್ ಆಕ್ಟ್ (ಕೆಪಿಸಿಇಎ) ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ಇಂಡಿಯನ್ ಕಾಂಕ್ರಿಟ್ ಇನ್ಸಿಟ್ಯೂಟ್ (ಐಸಿಐ)ನ ಮುಖ್ಯಸ್ಥ ಎಚ್.ಆರ್.ಗಿರೀಶ್ ತಿಳಿಸಿದ್ದಾರೆ.
ನಗರದ ಹರ್ಬನ್ ರೆಸಾರ್ಟ್ನಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ , ದಿ ರಾಮಕೋ ಸಿಮೆಂಟ್ಸ್ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು,ವಕೀಲರಿಗೆ ಬಾರ್ ಕೌನ್ಸಿಲ್, ವೈದ್ಯರಿಗೆ ಐಎಂಎ ಇರುವ ರೀತಿ,ಕೆಪಿಸಿಇಎ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ.ಇದು ಇಂಜಿನಿಯರ್‌ಗಳ ಜವಾಬ್ದಾರಿ ಯನ್ನು ಹೆಚ್ಚಿಸುವುದರ ಜತೆಗೆ,ಅವರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಕಾಯ್ದೆ ಯಾಗಿದೆ. ಈ ರೀತಿಯ ಕಾಯ್ದೆ ತಂದ ಎರಡನೇ ರಾಜ್ಯ ಕರ್ನಾಟಕವಾಗಲಿದೆ.ಡಿಪ್ಲಮೋ ಮುಗಿಸಿದವರು 2ವರ್ಷಗಳ ಕಾಲ, ಇಂಜಿನಿಯರಿಂಗ್ ಪದವಿ ಪಡೆದವರು ಒಂದು ವರ್ಷಗಳ ಕಾಲ ಅನುಭವ ಪಡೆಯಬೇಕಾಗಿದೆ ಎಂದರು.
ರಾಮ್ಕೋ ಸಿಮೆಂಟ್ ಲಿಮಿಟೆಡ್‌ನ ತಾಂತ್ರಿಕ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕೆ.ಪಿಳ್ಳೈ ಮಾತ ನಾಡಿ, ನಿರ್ಮಾಣ ಕ್ಷೇತ್ರದಲ್ಲಿ ಆಗಾಧವಾದ ಬೆಳೆವಣಿಗೆಯಾಗುತ್ತಿದೆ.ಐದು ವರ್ಷಗಳ ಹಿಂದೆ ಕಲಿತ ತಂತ್ರಜ್ಞಾನ ಇಂದು ಉಪಯೋಗಕ್ಕೆ ಬಾರದಂತಹ ಸ್ಥಿತಿ ಇದೆ ಎಂದರು.
ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಫಣಿರಾಜು ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಅವರ ನೆನಪಿಗಾಗಿ ಇಂದು ಇಂಜಿನಿಯರ್ಸ್ ಡೇ ಆಚರಿಸುತ್ತಿದ್ದೇವೆ.ಸರ್.ಎಂ.ವಿ ಅವರ ಇಂಜಿನಿಯರ್ ಆಗಿ, ಆಡಳಿತಗಾರರಾಗಿ ಹೆಸರು ಮಾಡಿದವರು,ಇವರ ಕಾಲದಲ್ಲಿ ಕರ್ನಾಟಕದಲ್ಲಿ ಕೈಗಾರಿಕೆಗಳು, ಬ್ಯಾಂಕುಗಳು, ಶಾಲಾ, ಕಾಲೇಜುಗಳು ನಿರ್ಮಾಣ ಗೊಂಡವು. ನೀರಾವರಿಗೆ ಇವರ ಕೊಡುಗೆ ಆಪಾರ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಜಿನಿರ‍್ಸ್ ಅಸೋಸಿಯೇಷನ್ ತುಮಕೂರು ಇದರ ನಿರ್ದೇಶಕ ಶ್ರೀಕಂಠಸ್ವಾಮಿ, ಎಂ.ವಿ.ರಾಮಮೂರ್ತಿ ಅವರ ನೇತೃತ್ವದಲ್ಲಿ 2006ರಲ್ಲಿ ಆರಂಭವಾದ ನಮ್ಮ ಸಂಸ್ಥೆ ನಿರ್ಮಾಣ ಕ್ಷೇತ್ರದ ಜತೆಗೆ ಎಲ್ಲಾ ಇಂಜಿನಿಯರಿಂಗ್ ವಿಭಾಗಗಳ ಹಿರಿಯ ಮತ್ತು ಕಿರಿಯ ಇಂಜಿನಿಯರ್‌ಗಳ ಸಮಾಗಮಕ್ಕೆ ವೇದಿಕೆ ಕಲ್ಪಿಸಿದೆ. ಅಲ್ಲದೆ ಜನಸಾಮಾನ್ಯರಿಗೆ ನಿರ್ಮಾಣ ಕ್ಷೇತ್ರದಲ್ಲಿ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ಬಿಲ್ಡ್ಟೆಕ್ ಹೆಸರಿನಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.
ಇಂಜಿನಿಯರ್ಸ್ ಡೇ ಅಂಗವಾಗಿ 12 ಜನ ಸಾಧಕರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ರಾಮ್ಕೋ ಸಿಮೆಂಟ್ ಲಿಮಿಟೆಡ್‌ನ ಡಿಜಿಎಂ ವೆಂಕಟರಾವ್, ಇಂಜಿನಿಯರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಡಿ.ರಾಜು,ಜಂಟಿ ಕಾರ್ಯದರ್ಶಿ ಹೆಚ್.ಎನ್.ಮಂಗಳಕುಮಾರ್, ನಿರ್ದೇಶಕರಾದ ಎ.ಸತೀಶ್, ಎಂ.ಎಸ್.ರವಿಕುಮಾರ್, ಟಿ.ಎನ್.ಶ್ರೀಕಂಠಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Tumkur News: ಕಳಪೆ ಔಷಧ, ರಸಗೊಬ್ಬರ ಮಾರಾಟ; 9 ಲಕ್ಷ ರೂ. ದಂಡ!