Saturday, 12th October 2024

Tumkur News: ನಾಗಮಂಗಲದಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ

ತುಮಕೂರು: ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆದ ಕೋಮುಗಲಭೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣವೇ ಕಾರಣ, ವೋಟ್ ಬ್ಯಾಂಕ್ ರಾಜಕಾರಣದಿಂದ ಮತಾಂಧ ಶಕ್ತಿಗಳನ್ನು ಮಟ್ಟಹಾಕದೆ ಕಡೆಗಣಿಸಿ, ಕುಮ್ಮಕ್ಕು ದೊರೆಯುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಜಿಲ್ಲಾ ಬಿಜೆಪಿ ಆಪಾದಿಸಿದೆ.

ಜಿಲ್ಲಾ ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ ಹೇಳಿಕೆ ನೀಡಿ, ನಾಗಮಂಗಲದ ಹಿಂದೂಗಳು ಪ್ರತಿವರ್ಷದಂತೆ ಗಣೇಶೋತ್ಸವ ಆಚರಿಸಿ ವಿಸರ್ಜನಾ ಮೆರವಣಿಗೆ ನಡೆಸುವ ವೇಳೆ ಮತಾಂಧ ಶಕ್ತಿಗಳು ಮೆರವಣಿಗೆ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ತೂರಿ ವಿಕೃತಿ ಮೆರೆದಿವೆ. ಇಂತಹ ಶಕ್ತಿಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ, ಗೃಹ ಇಲಾಖೆ ವಿಫಲವಾಗಿವೆ. ಸರ್ಕಾರದ ವೈಫಲ್ಯತೆ ಮತಾಂಧ ಶಕ್ತಿಗಳ ಕುಕೃತ್ಯಕ್ಕೆ ಬೆಂಬಲ ಸಿಕ್ಕಂತಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Mandya Violence: ನಾಗಮಂಗಲ ಗಲಭೆ: ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಅಮಾನತು

ಘಟನೆಯಿಂದ ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ ಅಪಾರ ಹಾನಿಯಾಗಿದ್ದರೂ ಗೃಹ ಸಚಿವ ಡಾ.ಪರಮೇಶ್ವರ್ ಅವರು ಇದೊಂದು ಸಣ್ಣ ಘಟನೆ ಎಂದು ಲಘುವಾಗಿ ಹೇಳಿರುವುದು ಖಂಡನೀಯ. ನಾಗಮಂಗಲದ ಘಟನೆ ಪೂರ್ವಯೋಜಿತ ಸಂಚು. ನಾವು ಏನೇ ಮಾಡಿದರೂ ಸರ್ಕಾರ ನಮ್ಮ ಪರವಾಗಿರುತ್ತದೆ ಎಂಬ ಧೋರಣೆಯಿಂದ ಇಂತಹ ಘಟನೆಗಳು ರಾಜ್ಯದಲ್ಲಿ ಹೆಚ್ಚುತ್ತಿವೆ.

ಕಳೆದ ವರ್ಷವೂ ನಾಗಮಂಗಲದಲ್ಲಿ ಇಂತಹುದ್ದೇ ಘಟನೆ ನಡೆದಿತ್ತು. ಅದರೂ ಸರ್ಕಾರ, ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸದೆ ನಿರ್ಲಕ್ಷ ಮಾಡಿದ ಪರಿಣಾಮ ಈ ಘಟನೆ ಮರುಕಳಿಸಿದೆ. ಸರ್ಕಾರ ಇಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಟಿ.ಆರ್.ಸದಾಶಿವಯ್ಯ ಒತ್ತಾಯಿಸಿದ್ದಾರೆ.