ಗುರುಪರದೇಶಿ ಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ವೈಭವದ ಅಂಬು ಹಾಯಿಸುವ ಕಾರ್ಯಕ್ರಮ
ತಿಪಟೂರು : ತಾಲ್ಲೂಕಿನ ಕೆರಗೋಡಿ ರಂಗಾಪುರದಲ್ಲಿ ಜನಪದ ಹಾಗೂ ಜಾನಪದ ಶೈಲಿ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ತೊಟ್ಟು, ಆಕರ್ಷಕವಾದ ವೇಷ ಧರಿಸಿ ಸಾವಿರಾರು ಭಕ್ತರು ಹರಕೆ ತೀರಿಸುವ ಮೂಲಕ ದಸರಾ ಹಬ್ಬವನ್ನು ಆಚರಣೆಯನ್ನು ಮಾಡಲಾಯಿತು.
ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಮಠದ ಗುರುಪರಂಪರೆಯಂತೆ ಭಾನುವಾರ ಮಧ್ಯಾಹ್ನ ಕೆರೆಗೋಡಿಯ ಮಹಾನವಮಿ ಮಂಟಪದ ತೋಪಿನಲ್ಲಿ ಅಂಬುಹಾಯಿಸುವ (ಶಮ್ಮಿಪೂಜೆ) ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಲಾಯಿತು.
ನಂತರ ಸ್ವಾಮೀಜಿ ಪತ್ರಿಕೆಯವರ ಜೊತೆ ಮಾತನಾಡಿ ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿ ರೈತರಿಗೆ ಸುಭಿಕ್ಷವಾಗಿ ಫಸಲು ದೊರೆಯಲಿದೆ. ರೈತರು ನಂಬಿದಂತಹ ಭೂತಾಯಿ ಎಂದಿಗೂ ಕೈ ಬಿಡುವುದಿಲ್ಲ. ಮುಂದಿನ ದಿನಮಾನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಶತ್ರುಗಳ ಸಂಹಾರ ಪ್ರತೀಕವಾದ ಆಯುಧ ಪೂಜೆ, ವಿಜಯದಶಮಿ ಹಾಗೂ ಅಂಬುಹಾಯಿಸುವ ಕಾರ್ಯಕ್ರಮಗಳು ಹಿಂದೂ ದೇಶದ ಅತ್ಯಂತ ಪಾವಿತ್ರö್ಯವಾದ ಹಬ್ಬಗಳು. ನಾಡಿನಲ್ಲಿ ಉಂಟಾಗಿರುವ-ಉಂಟಾಗಲಿರುವ ಕೆಟ್ಟ ಶಕ್ತಿಗಳನ್ನು ಮಟ್ಟಹಾಕಿ ಶಾಂತಿ, ನೆಮ್ಮದಿಗಾಗಿ ಇವುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಶತ್ರುಗಳನ್ನು, ಭ್ರಷ್ಟಾಚಾರಿಗಳನ್ನು ಮತ್ತು ದೌರ್ಜನ್ಯ ನಡೆಸುವವರನ್ನು ಸದೆಬಡಿದು ದೇಶಕ್ಕೆ, ಸಮಾಜದ ಒಳತಿಗಾಗಿ ದೇವರು, ದೇವತೆಗಳನ್ನು ಪೂಜಿಸುವ ಮೂಲಕ ಒಳಿತನ್ನು ಆಶಿಸುವ ಈ ಸಂದರ್ಭದಲ್ಲಿ ಮಾನವ ಕುಲಕ್ಕೆ ಯಾವುದೇ ಕೆಡುಕುಂಟಾಗದೆ ಒಳ್ಳೆಯದಾಗಲೆಂದು ತಿಳಿಸಿದರು.
ಜಾನಪದ ಮೆರಗು : ಬನ್ನಿ ಮಂಟಪಕ್ಕೆ ಶಂಕರೇಶ್ವರ ಸ್ವಾಮಿಯ ಮೂರ್ತಿಯನ್ನು ಮೂಲ ಸ್ಥಾನದಿಂದ ಆಕರ್ಷಕ ವಾದ ತಿರುಗುಣಿ ಅಶ್ವವಾಹನದಲ್ಲಿ ಉತ್ಸವಾದಿಗಳ ಮೂಲಕ ಸ್ವಾಮೀಜಿಯವರ ನೇತೃತ್ವದಲ್ಲಿ ಕೆರೆಗೋಡಿ ದೇವಾಲಯ ಮತ್ತು ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ಕರೆ ತರಲಾಗುವುದು.
ನಂತರ ಬನ್ನಿಮಂಟಪದಲ್ಲಿ ನಡೆಯುವ ಅಂಬುಹಾಯಿಸುವ ಕಾರ್ಯರ್ಕಮದಲ್ಲಿ ಭಕ್ತರು ತಮ್ಮಗಳ ಹರಕೆ ತೀರಿಸಲು ವಿವಿಧ ಬಗೆಯ ವೇಷಗಳನ್ನು ಧರಿಸುತ್ತಾರೆ. ಯುವಕರು ಅತೀ ಹೆಚ್ಚು ಬಗ್ಗಡಸೇವೆಯಲ್ಲಿ ತೊಡಗುತ್ತಾರೆ. ಜೊತೆಗೆ ಪುರುಷರು ಹೆಣ್ಣು ಮಕ್ಕಳ ವಿವಿಧ ಆಕರ್ಷಕ ಬಟ್ಟೆಗಳ ಧರಿಸಿ ಬರುತ್ತಾರೆ. ಬಗ್ಗಡ ತೊಯ್ದ ಬಟ್ಟೆಗಳು, ಗೋಣಿಚೀಲಗಳ ಉಡುಗೆ ತೊಡುಗೆಗಳನ್ನು ತೊಟ್ಟು ವಿವಿಧ ಭಂಗಿಗಳಲ್ಲಿ ಬಾಗಿಯಾಗುತ್ತಾರೆ. ಈ ಸೇವೆ ಪುರುಷರು ತಮ್ಮ ವೈಯಕ್ತಿಕ ಏಳಿಗೆಗೆ, ರೋಗರುಜಿನಗಳ ಮುಕ್ತಿಗಾಗಿ ಮಾಡಿಕೊಂಡ ಹರಕೆಯಾಗಿರುತ್ತೆ. ಹರಕೆಯ ಭಕ್ತಾದಿ ಗಳಿಗೆ ಶ್ರೀಗಳಿಂದ ಉತ್ತಮ ಏಳಿಗೆಗಗಾಗಿ ಹಣ ನೀಡಿ ಕಳುಹಿಸುವ ಪದ್ದತಿಯಿದೆ. ಜೊತೆಗೆ ಮೋಡಿ ಕಾರ್ಯಕ್ರಮ ಸಹ ಆಕರ್ಷಕವಾಗಿತ್ತು. ತಾಲ್ಲೂಕು, ಅಕ್ಕಪಕ್ಕದ ತಾಲ್ಲೂಕುಗಳಿಂದ ಅಂಬು ಕಾರ್ಯಕ್ರಮಕ್ಕೆ ಭಕ್ತರು ಸೇರಿರುತ್ತಾರೆ.
ಮಂಟಪದಲ್ಲಿ ಶಂಕರೇಶ್ವರಸ್ವಾಮಿಗೆ ಮಹಾಮಂಗಳಾರತಿ ನಡೆಸಿ ಬನ್ನಿಮಂಟಪದ ಅಡಿಯಲ್ಲಿ ನೆಟ್ಟು ಪೂಜಿಸಿದ್ದ ಗೊನೆಹೊತ್ತ ಬಾಳೆ ಗಿಡವನ್ನು ಕಡಿದುರುಳಿಸುವ ಮೂಲಕ ಅಂಬುಹಾಯಿಸುವ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಲಾಯಿತು. ನಂತರ ಎಲ್ಲರಿಗೂ ಬನ್ನಿ ಪತ್ರೆ ವಿತರಿಸಲಾಯಿತು.
ಇದನ್ನೂ ಓದಿ: Kantharaju Report: ಕಾಂತರಾಜು ವರದಿ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ಅ.16 ಕ್ಕೆ