Sunday, 15th December 2024

ವಾಚ್ ಮ್ಯಾನ್ ಮೇಲೆ ಹಲ್ಲೆ: 20 ಲಕ್ಷ ಮೌಲ್ಯದ ಟೈರ್ ಕಳ್ಳತನ

ಚಿಂಚೋಳಿ: ಪುರಸಭೆ ವ್ಯಾಪ್ತಿಗೆ ಬರುವ ಚಂದಾಪೂರದ ಎಸ್.ಬಿ.ಐ ಬ್ಯಾಂಕ್ ನ ಸಮೀಪದ ಬಸವ ಶೋರೂಂನಲ್ಲಿ ಸುಮಾರು 22 ಲಕ್ಷ ರು. ಮೌಲ್ಯದ ಟೈರ್ ಕಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ.

ತಡರಾತ್ರಿ 1 ಗಂಟೆ ಸುಮಾರಿಗೆ ಕಳ್ಳರು ಬಂದ ಶಬ್ದ ಕೇಳಿ ಕೆಳ ಮಹಡಿಯಲ್ಲಿದ್ದ ಕಾವಲುಗಾರ ಹೊರ ಬಂದಿದ್ದಾನೆ. ಆತನನ್ನು ತಳಿಸಿ ಟೈರುಗಳನ್ನು ಹೊರ ಹಾಕಿ ಲಾರಿಯಲ್ಲಿ ಒಯ್ದಿದ್ದಾರೆ. ಇದೇ ಶೋರೂಂನಲ್ಲಿ ಕಳೆದ 6 ತಿಂಗಳಲ್ಲಿ ಇದು 3ನೇ ಬಾರಿ ಕಳ್ಳತನವಾಗುತ್ತಿದೆ. ಮೊದಲ ಸಲ ₹3 ಲಕ್ಷದ ಕಳ್ಳಕನ ನಡೆದಿತ್ತು ಎರಡನೇ ಬಾರಿಗೆ ಯತ್ನ ನಡೆಸಿದರೂ ಟೈರ್ ಹೋಗಿರಲಿಲ್ಲ ಬರಿ ಯತ್ನ ನಡೆದಿತ್ತು. ಮೂರನೇ ಬಾರಿಗೆ ಭಾರಿ ಕಳ್ಳತನವಾಗಿದೆ ಎಂದು ಶೋರೂಮ್ ಮಾಲೀಕ ಸಚಿನ್ ಸುಂಕದ ಮಾಹಿತಿ ನೀಡಿದರು.

ಪ್ರಾಥಮಿಕ ಮಾಹಿತಿಯಂತೆ ಸುಮಾರು 60 ಟೈರ್ ಕಳ್ಳತನ‌ವಾಗಿವೆ. ಇದರಿಂದ ಶೋರೂಂ‌ ಮಾಲೀಕರಿಗೆ ₹20 ಲಕ್ಷ ನಷ್ಟ ಆಗಿರುವ ಅಂದಾಜಿದೆ. ಶೋರೂಂಗೆ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ ಆದರೆ ಅವುಗಳ ಮುಖವನ್ನು ಕಳ್ಳರು ತಿರುವಿದ್ದಾರೆ. ಸಿ.ಸಿ ಕ್ಯಾಮೆರಾದ ಸ್ಟೋರೇಜ್ ಡಿವಿಆರ್ ಉಪಕರಣವನ್ನು ಕಳ್ಳರು ಒಯ್ದಿದ್ದಾರೆ.

ಟೈರ್ ಕಳತನ ಬಳಿಕ ಕಾವಲುಗಾರ ಮಾಲೀಕನ‌ ಮನೆಗೆ ಹೋಗಿ ವಿಷಯ ತಿಳಿಸಿದ್ದಾನೆ. ನಸುಕಿನ 4 ಗಂಟೆಗೆ ಪಿಎಸ್ಐ ಮಂಜುನಾಥರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಎಂ.ಆರ್.ಎಫ್ ಬಸವ ಶೋರೂಂ ಕಳ್ಳತನದಿಂದ ಚಿಂಚೋಳಿ ವರ್ತಕರು ಬೆಚ್ಚಿಬಿದ್ದು, ನಗರದ ಮುಖ್ಯ ರಸ್ತೆಯಿಂದ ಪೊಲೀಸ್ ಠಾಣೆಯವರೆಗೆ ಪಾದಯಾತ್ರೆ ಮೂಲಕ ತೆರಳಿ ಠಾಣೆಯ ಎದುರಿಗೆ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಪದೇ ಪದೇ ಕಳ್ಳತನವಾಗುತ್ತಿವೆ. ರಾತ್ರಿ ವೇಳೆ ಪೊಲೀಸ್ ಇಲಾಖೆಯಿಂದ ಗಸ್ತು ಬಿಗಿಗೊಳಿಸಬೇಕು. ಕಳ್ಳರನ್ನು ಕೂಡಲೇ ಬಂದಿಸಬೇಕು ಎಂದು ವರ್ತಕ ಸಂಘದ ಅಧ್ಯಕ್ಷ ಅಜೀತ್ ಪಾಟೀಲ್, ನಾಗರಾಜ ಕಲಬುರಗಿ, ಮಹಾಂತೇಶ ಮಜ್ಜಿಗಿ, ರಮೇಶ ಬೇಕರಿ, ಉಮಾ ಪಾಟೀಲ್, ಆನಂದ ಹಿತ್ತಲ ಸೇರಿದಂತೆ ವರ್ತಕರು ಆಗ್ರಹಿಸಿದ್ದಾರೆ.