Thursday, 12th December 2024

Arif Mohammad Khan: ಕೊಲ್ಲೂರು ದೇಗುಲಕ್ಕೆ ಭೇಟಿ ನೀಡಿದ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌

Arif Mohammad Khan

ಕೊಲ್ಲೂರು: ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ (Arif Mohammad Khan) ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ
ಶ್ರೀ ಕ್ಷೇತ್ರ ಕೊಲ್ಲೂರಿಗೆ (Kollur Temple) ಭೇಟಿ ನೀಡಿ ಮೂಕಾಂಬಿಕಾ ದೇವಿಯ ದರ್ಶನ ಪಡೆದರು.

ಕೊಲ್ಲೂರು ದೇವಸ್ಥಾನಕ್ಕೆ ತೆರಳಿದ  ಆರೀಫ್ ಮೊಹಮ್ಮದ್ ಖಾನ್‌ ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ನಡೆಸಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯಪಾಲರನ್ನು ದೇಗುಲದ ವತಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ದೇಗುಲದ ಆಡಳಿತಾಧಿಕಾರಿ ಕುಂದಾಪುರ ಉಪವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ರಾಜ್ಯಪಾಲರನ್ನು ಗೌರವಿಸಿದರು. ಅರ್ಚಕರಾದ ಎನ್.ನರಸಿಂಹ ಅಡಿಗ, ಎನ್.ಸುಬ್ರಮಣ್ಯ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ಕೊಲ್ಲೂರು ಭೇಟಿ ಬಳಿಕ ಆರೀಫ್ ಮೊಹಮ್ಮದ್ ಖಾನ್‌ ಅವರು ಉಡುಪಿಗೆ ತೆರಳಿದರು. ಇಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಯೋಜಿಸಿರುವ ಅಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ.

ಅಮ್ಮನ ಜತೆ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಜ್ಯೂ. ಎನ್‌ಟಿಆರ್‌

ಉಡುಪಿ: ಟಾಲಿವುಡ್‌ನ ಖ್ಯಾತ ನಟ ಜ್ಯೂನಿಯರ್‌ ಎನ್‌ಟಿಆರ್‌ (Junior NTR) ಅವರು  ಕುಟುಂಬದ ಜತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದರು. ಈ ಮೂಲಕ ಅವರು ತಾಯಿಯ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಮಗನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂದು ತಾಯಿ ಬಯಸಿದ್ದರಿಂದ, ನಟ ಜ್ಯೂನಿಯರ್‌ ಎನ್‌ಟಿಆರ್‌ ಅವರು ತಾಯಿ ಶಾಲಿನಿ ನಂದಮೂರಿ ಹಾಗೂ ಪತ್ನಿ ಲಕ್ಷ್ಮಿ ಪ್ರಣತಿ ಅವರೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.

ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ ನಟ ತಾರಕ್ ಅವರನ್ನು ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ (Rishab shetty) ಸ್ವಾಗತಿಸಿದರು. ಬಳಿಕ ಒಟ್ಟಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅವರು ಭೇಟಿ ನೀಡಿದರು. ಎನ್‌ಟಿಆರ್‌ ಅವರ ತಾಯಿ ಶಾಲಿನಿ ನಂದಮೂರಿ ಅವರು ಕುಂದಾಪುರ ಮೂಲದವರಾಗಿದ್ದು, ಅವರ ಕುಟುಂಬ 40 ವರ್ಷಗಳ ಬಳಿಕ ಉಡುಪಿಗೆ ಭೇಟಿ ನೀಡಿದ್ದು ವಿಶೇಷ. ಉಡುಪಿ ಭೇಟಿ ವೇಳೆ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಉಪಸ್ಥಿತರಿದ್ದರು.

ಉಡುಪಿ ಕೃಷ್ಣ ಮಠ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೂ.ಎನ್‌ಟಿಆರ್‌ ಅವರು, ನನ್ನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂಬ ನನ್ನ ತಾಯಿಯ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಇದು ಸೆಪ್ಟೆಂಬರ್ 2ರ ನನ್ನ ತಾಯಿಯ ಜನ್ಮದಿನಕ್ಕೆ ನಾನು ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ನಿರ್ಮಾಪಕ ವಿಜಯ್‌ ಕಿರಗಂದೂರು, ನನ್ನ ಆತ್ಮೀಯ ಸ್ನೇಹಿತ, ನಿರ್ದೇಶಕ ಪ್ರಶಾಂತ್ ನೀಲ್ ಇದನ್ನು ಸಾಧ್ಯವಾಗಿಸಿದ್ದಾರೆ. ಇನ್ನು ರಿಷಬ್‌ ಶೆಟ್ಟಿ ಅವರ ಉಪಸ್ಥಿತಿ ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.