Sunday, 15th December 2024

ಭಟ್ಕಳದಲ್ಲಿ ಭುಗಿಲೆದ್ದ ಭಾಷಾ ವಿವಾದ:ಪುರಸಭೆ ಕಟ್ಟಡಕ್ಕೆ ಉರ್ದು ಭಾಷೆ ಫಲಕ!

– ಈ ಹಿಂದೆ ಕಾರವಾರ ನಗರಸಭೆ ವ್ಯಪ್ತಿಯಲ್ಲಿ ಅನ್ಯಭಾಷೆಯ ನಾಮಫಲಕ ಅನಾವರಣವಾಗಿತ್ತು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಕಾರವಾರ ನಗರಸಭೆ ಇ ಹಿಂದೆ ದೇವನಾಗರ ಲಿಪಿಯಲ್ಲಿ ಕೊಂಕಣಿ ಭಾಷೆಯಲ್ಲಿ ನಾಮಫಲಕ ಅಳವಡಿಸಿತ್ತು.

ಇದೀಗ ಭಟ್ಕಳ ಪುರಸಭಾ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪುರಸಭೆ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿದ ನಂತರ ಸೋಮವಾರ ಪುರಸಭೆ ಎದುರು ನಾಮಫಲ ಅಳವಡಿಸಲು ಗುತ್ತಿಗೆದಾರ ಸಿದ್ದತೆ ಮಾಡಿಕೊಂಡಿದ್ದರು. ಕನ್ನಡ, ಇಂಗ್ಲೀಷ ನಂತರ ಉರ್ದು ಭಾಷೆಯಲ್ಲಿ “ಪುರಸಭಾ ಕಾರ್ಯಾಲಯ ಭಟ್ಕಳ” ಎಂಬ ನಾಮ ಫಲಕವನ್ನು ಅಳವಡಿಸಲಾಗುತಿತ್ತು.

ಇದನ್ನು ಗಮನಿಸಿದ ಕನ್ನಡಪರ ಹಾಗೂ ಹಿಂದೂ ಸಂಘಟನೆಯವರು ಉರ್ದು ನಾಮ ಫಲಕ ಅಳವಡಿಸದಂತೆ ಸ್ಥಳದಲ್ಲಿ ಗುಂಪು ಸೇರಿ ವಿರೋಧ ವ್ಯಕ್ತಪಡಿಸಿದರು. ಪೊಲೀಸರೆದುರೇ ಪ್ರತಿಭಟನಾಕಾರರು ಸ್ಥಳದಲ್ಲಿಯೇ ನಾಮಫಲಕ ತೆರವು ಮಾಡುವಂತೆ ಪಟ್ಟುಹಿಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿ ಯಾಯಿತು.

ಸ್ಥಳಕ್ಕೆ ಆಗಮಿಸಿದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಹಳೆಯ ಪುರಸಭೆ ಕಟ್ಟಡ ದಲ್ಲಿ ಪುರಸಭಾ ನಾಮಫಲಕವನ್ನು ಕನ್ನಡ, ಇಂಗ್ಲೀಷ ಹಾಗೂ ಉರ್ದು ಭಾಷೆಯಲ್ಲಿ ಬರೆಯಿಸಲಾಗಿತ್ತು. ಅದನ್ನೆ ಇಲ್ಲಿ ಅಳವಡಿಸಿದ್ದೇವೆ. ಹೊಸದಾಗಿ ನಾವು ಎನೂ ಬದಲಾವಣೆ ಮಾಡಿಲ್ಲ ಎಂದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಉರ್ದು ನಾಮಫಲಕ ತೆರವು ಮಾಡುವ ತನಕ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು ,ಮುಸ್ಲೀಂ ಯುವಕರ ಮಧ್ಯ ಮಾತಿನ ಚಕಮಕಿ ನಡೆದಿದ್ದು ಪೋಲಿಸರು ಮಧ್ಯ ಪ್ರವೇಶಿಸಿ ಉದ್ರಿಕ್ತ ವಾತಾವರಣ ವನ್ನು ಶಮನ ಮಾಡುವ ಪ್ರಯತ್ನ ಮಾಡಿದರು.

ಕನ್ನಡ ಹಿಂದಿ ಇಂಗ್ಲೀಷ ಬಿಟ್ಟು ಬೇರೆ ಭಾಷೆಗಳಿಗೆ ಆಧ್ಯತೆ ಇಲ್ಲ, ಪ್ರಾದೇಶಿಕ ಭಾಷೆಗೆ ತಕ್ಕಂತೆ ನಾಮಫಲಕ ಅಳವಡಿಸಿದರೆ ಹತ್ತು ಹಲವು ಭಾಷೆಗಳಿದ್ದು ಅವರೆಲ್ಲಾ ಭಾಷೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಾಗುತ್ತದೆ.ಹಾಗಾಗಿ ಸರ್ಕಾರಿ ಕಚೇರಿ ಯಾಗಿರುವ ಭಟ್ಕಳ ಪುರಸಭೆಗೆ ಅಳವಡಿಸಿದ ಉರ್ದು ನಾಮಫಲಕವನ್ನು ತೆರವುಗೊಳಿಸಬೇಕು ಎಂದು ಭುವನೇಶ್ವರರಿ ಕನ್ನಡ ಸಂಘ ಹಾಗೂ ಭಟ್ಕಳದ ವಿವಿಧ ಸಂಘಟನೆಗಳು ಪುರಸಭೆ ಮುಖ್ಯ ಅಧಿಕಾರಿಗಳಿಗೆ, ತಹಶಿಲ್ದಾರರ ರಿಗೆ ಮತ್ತು ಡಿ ವೈ ಎಸ್ ಪಿ, ಅವರಿಗೆ ಮನವಿ ನೀಡಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭುವನೇಶ್ವರರಿ ಕನ್ನಡ ಸಂಘ ಅಧ್ಯಕ್ಷ ರಮೇಶ್ ನಾಯ್ಕ ಮತ್ತು ಶ್ರೀಕಾಂತ್ ನಾಯ್ಕ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ ಮಹಾಬಲೇಶ್ವರ ನಾಯ್ಕ, ಪಿಎಸೈಗಳಾದ ಸುಮಾ, ಭರತ್ ಹಾಗೂ ಹನುಮಂತಪ್ಪ ಕುಡುಗುಂಟಿ ಸ್ಥಳದಲ್ಲಿ ಇದ್ದು ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಸಧ್ಯ ಕನ್ನಡ ಸಂಘಟನೆ ಒಂದು ದಿನದ ಕಾಲ ಪುರಸಭೆಗೆ ಗಡವು ನೀಡಿದ್ದು ಮುಂದೆ ಪುರಸಭೆ ಆಡಳಿತ ಯಾವ ನಿರ್ದಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಈ ಹಿಂದೆ ಕನ್ನಡ ನಾಡಲ್ಲಿ ಕನ್ನಡ ನಾಮಫಲಕವೇ ಸೂಕ್ತ ಅನ್ಯ ಭಾಷೆ ಬೇಡ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ ಸೋಮಶೇಖರ ಉತ್ತರಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.