Thursday, 12th December 2024

ಹಿಂದೂ ಮಹಾಗಣಪತಿ ವಿಸರ್ಜನೆ ಸೆ.30ಕ್ಕೆ

ತುಮಕೂರು: ನಗರದ ಟೌನ್‌ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯಲ್ಲಿ ಸ್ಥಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಸೆಪ್ಟಂಬರ್ 30 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಹಿಂದೂ ಮಹಾ ಗಣಪತಿ ಸ್ವಾಗತ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷದ್ ಬಜರಂಗದಳ ತುಮಕೂರು ಇವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ 6ನೇ ವರ್ಷದ ಹಿಂದೂ ಮಹಾ ಗಣಪತಿಯ ಅದ್ದೂರಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬೃಹತ್ ಮೆರವಣಿಗೆ ಮತ್ತು ಶೋಭಾ ಯಾತ್ರೆ ಹಮ್ಮಿಕೊಳ್ಳ ಲಾಗಿದೆ ಎಂದರು.
ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯ ಜೊತೆಗೆ ಬಜರಂಗದಳ ಆರಂಭವಾಗಿ 50 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಆರಂಭವಾಗಿರುವ ಶೌರ್ಯ ಜಾಗರಣಾ ರಥಯಾತ್ರೆ ಸಹ ಮೆರವಣಿಗೆ ಯೊಂದಿಗೆ ಸಾಗಲಿದೆ.ನಗರದ ಬಿ.ಜಿ.ಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತದಿಂದ, ಮಾರ್ಕೆಟ್ ಮಾರ್ಗವಾಗಿ ಮಂಡಿಪೇಟೆ, ಆಶೋಕ ರಸ್ತೆ,ಬಿ.ಎಚ್ ರಸ್ತೆ, ಎಂ.ಜಿ. ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ ಅಂಬೇಡ್ಕರ್ ರಸ್ತೆ,ಕೋಟೆ ಆಂಜನೇಯಸ್ವಾಮಿ ವೃತ,ಗಾರ್ಡನ್ ರಸ್ತೆ ಮಾರ್ಗವಾಗಿ ಚಿಕ್ಕಪೇಟೆ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುವುದು. ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಾದ ನಂದಿ ದ್ವಜ, ವೀರಗಾಸೆ, ಡಂಕವಾದ್ಯ, ಪುಣೇರಿ ಡೋಲ್ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಲಿವೆ.ಪ್ರಮುಖ ವೃತ್ತಗಳಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ವಿಸರ್ಜನಾ ಮಹೋ ತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಹಿಂದೂ ಮಹಾಗಣಪತಿ ಸ್ವಾಗತ ಸಮಿತಿ ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್ ಮಾತನಾಡಿ,ಈ ಬಾರಿಯ ಹಿಂದೂ ಗಣಪತಿ ವಿಸರ್ಜನಾ ಮಹೋತ್ಸವದ ಪ್ರಮುಖ ಆಕರ್ಷಣೆ ಎಂದರೆ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆ.ಈ ಶೌರ್ಯ ಜಾಗರಣ ರಥಯಾತ್ರೆ ಹಿಂದೂ ಧರ್ಮವ ವೈಭವಯುತ ಚರಿತ್ರೆಯನ್ನು ಇಡೀ ಸಮಾಜಕ್ಕೆ ತಿಳಿಸುತ್ತಾ ಹಿಂದೂ ಸಮಾಜದ ಮೇಲಾಗುತ್ತಿರುವ ದಾಳಿಯನ್ನು ತಿಳಿಸುವ ಉದ್ದೇಶದಿಂದ ಹಾಗು ಗೋವು, ದೇವಸ್ಥಾನ ಗಳ ರಕ್ಷಣೆ,ಹಿಂದೂಗಳಲ್ಲಿ ಸಾಮರಸ್ಯತೆ, ಯುವ ಪೀಳಿಗೆಯಲ್ಲಿ ರಾಷ್ಟ್ರ ಭಕ್ತಿ,ಧರ್ಮ ನಿಷ್ಠೆ ಮೂಡಿಸುವುದು, ಲವ್ ಜಿಹಾದ್,ಮತಾಂತರ,ಗೋ ಹತ್ಯೆ ತಡೆಯುವುದು. ನಾವೆಲ್ಲ ಹಿಂದೂ ನಾವಲ್ಲ ಒಂದು ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಗಣಪತಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಸಿ.ವಿ.ಮಹದೇವಯ್ಯ, ಕೋರಿಮಂಜುನಾಥ್,ಸಹಕಾರ್ಯದರ್ಶಿ ನರಸಿಂಹಮೂರ್ತಿ,ಆರ್.ಎಲ್.ರಮೇಶಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.