Sunday, 24th November 2024

Dasara: ಜಿಲ್ಲೆಯಲ್ಲಿ ಆಯುಧಪೂಜೆ ವಿಜಯದಶಮಿಗೆ ಅದ್ಧೂರಿ ತಯಾರಿ

ದಸರಾ ಹಬ್ಬಕ್ಕೆ ತಟ್ಟಿದೆ ಬೆಲೆಯೇರಿಕೆ ಬಿಸಿ ; ಹೂವು ಹಣ್ಣು ಸಿಹಿ ಖರೀದಿ ಜೋರು ಜೋರು….

ಚಿಕ್ಕಬಳ್ಳಾಪುರ: ನವರಾತ್ರಿ ಕೊನೆಯಾಗುತ್ತಿದ್ದು ಆಯುಧಪೂಜೆ ವಿಜಯದಶಮಿ ಆಚರಣೆಗೆ ಜಿಲ್ಲೆ ಸಜ್ಜಾಗಿದೆ. ಶುಕ್ರವಾರ ಆಯುಧಪೂಜೆ, ಶನಿವಾರ ವಿಜಯದಶಮಿಮಿದೆ. ಈ ಹೊತ್ತಿನಲ್ಲಿ ಹೂವು ಹಣ್ಣು ಕಾಯಿ ಸಿಹಿ ಪದಾರ್ಥ ಗಳ ಬೆಲೆ ಗಗನ ಮುಖಿಯಾಗಿರುವುದು ಬಡವರ ಹಬ್ಬದ ಸಂಭ್ರಮಕ್ಕೆ ಹುಳಿ ಹಿಂಡಿದೆ.

ಹೌದು. ಕಳೆದ ವಾರಕ್ಕೆ ಹೋಲಿಸಿದರೆ ಹೂವು ಹಣ್ಣು ಕಾಯಿ ತಾಂಬೂಲದ ಬೆಲೆ ಗ್ರಾಹಕರ ಕೈಸುಡುವಂತೆ ಏರಿಕೆ ಕಂಡಿದೆ.ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಯಲ್ಲಿ ಗುರುವಾರ ಒಂದು ಕೆ.ಜಿ.ಸೇವಂತಿ ಬೆಲೆ ೨೦೦ -೨೫೦ ಇದ್ದರೆ ಗುಲಾಬಿ ೨೫೦ ರಿಂದ ೪೫೦ವರೆಗೆ ಬಿಕರಿಯಾಗಿದೆ. ಚೆಂಡುಹೂವು ಕೆ.ಜಿ ೮೦-೧೦೦ ರೂಪಾಯಿದೆ. ಸೇಬು-೨೦೦, ಏಲಕ್ಕಿ ಬಾಳೆ- ೧೦೦, ದಾಳಿಂಬೆ-೨೦೦, ಸಿಹಿಬೂಂದಿ ಕೆ.ಜಿಗೆ ೧೮೦ ರಿಂದ ೨೦೦,ತುಪ್ಪದ ಮೂಸೂರು ಪಾಕ್ ೪೦೦ ರಿಂದ ೮೦೦ ಇದೆ.ವೀಳ್ಯದೆಲೆ ಒಂದು ಕಟ್ಟು ೨೦೦, ಅಡಿಕೆ ೧೦೦ಗ್ರಾಮ್ ೧೮೦-೨೦೦ ಇದೆ.

ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತಿಹೆಚ್ಚು ಹೂವಿನ ಬೆಳೆಗಾರರಿದ್ದರೂ ಕಟ್ಟಿರುವ ಹೂವಿನ ಹಾರಗಳ ಬೆಲೆ ಬೆಂಗಳೂರನ್ನು ಮೀರಿಸುವಂತಿದೆ. ನಾಲ್ಕು ಅಡಿ ಎತ್ತರದ ಹಾರ ೪೦೦೦-೫೦೦೦ಕ್ಕೆ ಮಾರಾಟವಾಗುತ್ತದೆ. ಮನೆಯ ಪೋಟೋಗೆ ಹಾಕುವಷ್ಟು ಸಣ್ಣ ಹಾರ ೩೦೦ರೂಪಾಯಿ ಆಗಿದೆ.ಏಕೆಂದರೆ ಸರಕಾರಿ ನೌಕರಿಯಲ್ಲಿರುವ ಅಧಿಕಾರಿ ಗಳಿಂದ ಮೊದಲಾಗಿ ಹಳ್ಳಿಗಾಡಿನ ರೈತನವರೆಗೆ ಆಯುಧಪೂಜೆ ವಿಜಯದಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಕಾರಣ ಹಬ್ಬದ ಸಾಮಗ್ರಿಗಳ ಬೆಲೆಯೇರಿಕೆ ಸಹಜ ಎನ್ನುವುದು ಜನರಿಗೆ ಗೊತ್ತಿರುವ ಸಂಗತಿ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಾಪಾರಸ್ಥರು ಒಂದಕ್ಕೆ ಎರಡುರಷ್ಟು ಬೆಲೆಯೇರಿಸಿ ಲಾಭ ಮಾಡಿಕೊಳ್ಳಲು ಮುಂದಾಗುವುದು ಕೂಡ ಅಷ್ಟೇ ಸಹಜ.

ಏನೇ ಆಗಲಿ ಈ ಬಾರಿ ಮಳೆ ಚೆನ್ನಾಗಿ ಸುರಿದು ಬೆಳೆಗಳು ಒಂದು ಹಂತಕ್ಕೆ ಬೆಳೆದಿರುವ ಕಾರಣ ಶಕ್ತಿ ದೇವತೆಯರ ಆರಾಧನೆಯ ಆಯುಧಪೂಜೆ ವಿಜಯದಶಮಿಯನ್ನು ಹಳ್ಳಿ ನಗರ ಎನ್ನದೆ ಸಕಲರೂ ಶ್ರದ್ಧಾಭಕ್ತಿಯಿಂದ ಆಚರಿಸಲು ಮುಂದಾಗಿರುವ ಕಾರಣ ಹಬ್ಬದ ವಸ್ತುಗಳ ಖರೀದಿ ಜೋರಾಗಿ ಸಾಗಿತು. ಹೂವಿನ ಅಂಗಡಿ, ಸಿಹಿ ಪದಾರ್ಥಗಳ ಅಂಗಡಿ ಮುಂದೆ ಜನಸಾಲುಗಟ್ಟಿ ನಿಂತು ವ್ಯಾಪಾರ ಮಾಡುತ್ತಿದ್ದರು.

ವಾಹನ ಮತ್ತು ಆಯುಧಗಳಿಗೆ ಪೂಜೆ ಮಾಡಲು ಬೇಕಾದ ಬಾಳೆಕಂದು, ಕಬ್ಬಿನ ಗರಿ, ಮಾವು ಸೊಪ್ಪುಗಳನ್ನು ಕೊಳ್ಳಲು ಜನ ಹೆಚ್ಚಾಗಿ ಬರುತ್ತಾರೆ ಎಂದು ಭಾವಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಡ್ಡೆ ಹಾಕಿಕೊಂಡು ಮಾರಾಟದಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಇನ್ನು ಶಾಲಾ ಕಾಲೇಜು ತಾಲೂಕು ಆಫೀಸು, ಜಿಲ್ಲಾಡಳಿತ ಭವನದಲ್ಲಿ ಕೆಲಸ ಮಾಡುವ ನೌಕರ ಸಿಬ್ಬಂದಿ ವರ್ಗ ಗುರುವಾರವೇ ತಳಿರುತೋರಣ ಕಟ್ಟಿ ಪೂಜೆ ಮಾಡಿ ಸಿಹಿವಿತರಣೆ ಮಾಡಿಕೊಳ್ಳುತ್ತಿದ್ದರು.

ಒಟ್ಟಾರೆ ಭಾರತೀಯ ಶಾಸ್ತ್ರ ಸಂಪ್ರದಾಯದ ಭಾಗವಾಗಿರುವ ಆಯುಧಪೂಜೆ ವಿಜಯದಶಮಿ ಹಬ್ಬವನ್ನು ಆಚರಿಸಲು ಜಿಲ್ಲೆಯ ಜನತೆ ತೋರಿರುವ ಉತ್ಸಾಹವನ್ನು ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಳ್ಳು ನಿರತರಾಗಿರುವ ದೃಶ್ಯಗಳೇ ಸಾಕ್ಷೀಕರಿಸಿದ್ದವು.