Saturday, 14th December 2024

ಜನವರಿ 23ರೊಳಗೆ ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆ: ಕಾರಜೋಳ

ವಿಜಯಪುರ : ಮುಂಬರುವ ಜನವರಿ 23ರ ಒಳಗಾಗಿ ವಿಜಯಪುರ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸ ಲಾಗುವುದು,  ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ಬುರನಾಪುರದಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈಗ ನಡೆಯು ತ್ತಿರುವ ಕಾಮಗಾರಿ ಕೇವಲ ಶೇ.4 ರಷ್ಟು ಮಾತ್ರ ಮುಗಿದಿದೆ, ಇದು ನನಗೆ ಸಮಾಧಾನ ತಂದಿಲ್ಲ. ಹೀಗಾಗಿ ಕಾಮಗಾರಿಯನ್ನು ಚುರುಕುಗೊಳಿಸಲು ಹಾಗೂ ಯಾವುದೇ ಕಾಮಗಾರಿ ಬಾಕಿ ಉಳಿಯದಂತೆ ಕ್ರಮವಹಿಸಲು ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.

ಸರ್ಕಾರದ ಮಟ್ಟದಲ್ಲಿ ಏನಾದರೂ ಅಡೆತಡೆಗಳಿದ್ದರೆ ಅದನ್ನು ನಾನು ಸಚಿವ ನಾಗಿ ಬಗೆಹರಿಸಿಕೊಡುತ್ತೇನೆ ಏನೇ ಆಗಲಿ ಜನೆವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಜೊತೆಗೆ ಈ ವಿಮಾನನಿಲ್ದಾಣದ ರನ್ ವೇ ಗೆ ಅಡ್ಡಲಾಗಿದ್ದ ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಲುವೆಯನ್ನು ಸ್ಥಳಾಂತ ರಿಸಲಾಗಿದ್ದು, ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇದೇವೇಳೆ ಸುಮಾರು 7 ವರ್ಷಗಳಿಂದ ಹೊರ್ತಿ ರೇವನಸಿದ್ದೇಶ್ವರ ಏತ ನೀರಾವರಿಗೆ ಹೋರಾಟ ನಡೆಯುತ್ತಿದೆ. ಅಲ್ಲಿಯ ರೈತರು ಕೂಡಾ ನನ್ನನ್ನು ಭೇಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಮನವಿ ಮಾಡಿದ್ದರು, ಅದರಂತೆ 2700 ಕೋಟಿ ವೆಚ್ಚದ ಅತಿದೊಡ್ಡ ಕಾಮಗಾರಿಯಾದ ಇದಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ, ಜೊತೆಗೆ ಪರಿಸರ ಇಲಾಖೆ ಕೂಡಾ ಅನುಮತಿ ನೀಡಿದ್ದು ಶೀಘ್ರವೇ ಕಾಮಗಾರಿ ಕೈಗೆತ್ತಿ ಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದು 56 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಇದಾಗಲಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಜರಿದ್ದರು.