Sunday, 15th December 2024

ಟೈರ್​ ಸ್ಫೋಟ: ಬಸ್​ ಸುಟ್ಟು ಕರಕಲು

ವಿಜಯಪುರ: ವಿಜಯಪುರ ತಾಲೂಕಿನ ಹಿಟ್ಟನಹಳ್ಳಿ ಬಳಿಯ ರಾ.ಹೆದ್ದಾರಿ ಐವತ್ತರಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಖಾಸಗಿ ಟ್ರಾವೆಲ್ಸ್​ಗೆ ಸೇರಿದ ಖಾಸಗಿ ಬಸ್ ಟೈರ್​ ಸ್ಪೋಟಗೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.

ಟೈರ್‌ ಸ್ಪೋಟದ ಕಾರಣದಿಂದಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಅವಘಡ ಸಂಭವಿಸಿದೆ. ಬಸ್​​ನ ಚಕ್ರದಲ್ಲಿ ಬೆಂಕಿ ಕಾಣಿಸಿ ಕೊಳ್ಳುತ್ತಿದ್ದಂತೆ ಚಾಲಕ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಎಲ್ಲ ಪ್ರಯಾಣಿಕರು ತಮ್ಮ ಲಗೇಜ್‌ ಸಮೇತ ಸುರಕ್ಷಿತವಾಗಿ ಕೆಳಗಿಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಟ್ಟು 36 ಜನ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ವಿಜಯಪುರ ಹಾಗೂ ಬಸವನ ಬಾಗೇವಾಡಿಯ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೈವೇ ಪೆಟ್ರೋಲಿಂಗ್ ವಾಹನ, ಆಂಬ್ಯುಲೆನ್ಸ್ ಗಳಿಂದಲೂ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ದಲ್ಲಿ ವ್ಯತ್ಯಯ ಉಂಟಾಗಿತ್ತಾದರೂ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಸಂಚಾರಿ ಕ್ರಮಗಳನ್ನ ಜರುಗಿಸುವ ಮೂಲಕ ರಾ.ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಲ್ಲಿ ಸುಟ್ಟು ಕರಕಲಾದ ಈ ಬಸ್​ನ ವಿಮೆ ಡಿ.24ಕ್ಕೆ ಅಂತ್ಯವಾಗಲಿತ್ತು.