ಬೆಂಗಳೂರು: ಭಾರತಾದ್ಯಂತ ಸುಮಾರು 12 ಕೋಟಿ ಜನಸಂಖ್ಯೆ ಇರುವ ವಿಶ್ವಕರ್ಮ ಸಮಾಜಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಕರ್ಮ ಸಮ್ಮಾನ್ ಯೋಜನೆಯನ್ನು ತಂದು ಲಕ್ಷಾಂತರ ಕುಟುಂಬಗಳಿಗೆ ನೆರವಾಗಿ, ನಮ್ಮ ಸಮಾಜವನ್ನು ಪ್ರಪಂಚಾದ್ಯಂತ ಗುರುತಿಸುವ ಹಾಗೆ ಮಾಡಿದ್ದಾರೆ.
ಆದ್ದರಿಂದ ಬಿಜೆಪಿಗೆ ನಮ್ಮ ಸಮುದಾಯ ಬೆಂಬಲವಾಗಿ ನಿಲ್ಲಲಿದೆ ಎಂದು ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘದ ಅಧ್ಯಕ್ಷ ಡಾ.ಜಯಂತ್ ಕೆ.ಎಂ. ತಿಳಿಸಿದರು.
ನಮ್ಮ ಸಮಾಜದ ಹಿತದೃಷ್ಟಿ ಎಂದರೆ ನಮ್ಮ ವಿಶ್ವಕರ್ಮ ಸಮಾಜವು ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮಾಜಕ್ಕೆ ಬೆಂಬಲ ನೀಡುತ್ತಾರೆಂಬ ನಂಬಿಕೆ ಯಿಂದ ನಮ್ಮ ಸಂಘಟನೆ ಬೆಂಬಲವನ್ನು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನೀಡುವ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಮೋದಿಜಿಯವರು ವಿಶ್ವಕರ್ಮ ಸಮ್ಮಾನ್ ಯೋಜನೆ ಕೊಡುವ ಮುಖಾಂತರ ನಮ್ಮ ಸಮಾಜಕ್ಕೆ ಮನ್ನಣೆ ನೀಡಿದ್ದು, ಇದರಿಂದ ನಮ್ಮ ಸಮಾಜದ ಕಾಯಕವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ.
ಅಯೋಧ್ಯ ಶ್ರೀರಾಮನ ವಿಗ್ರಹವನ್ನು ಕೆತ್ತನೆ ಮಾಡಲು ನಮ್ಮ ಸಮಾಜದ ಶಿಲ್ಪಿ ಅರುಣ್ ಯೋಗಿರಾಜ್ ರವರಿಗೆ ಅವಕಾಶ ನೀಡುವ ಮುಖಾಂತರ ನಮ್ಮ ಸಮಾಜದ ಕೀರ್ತಿಯನ್ನು ರಾಷ್ಟ್ರ ಹಾಗೂ ವಿಶ್ವಕ್ಕೆ ತೋರಿಸುವಲ್ಲಿ ಮೋದಿಜಿರವರ ಸಹಕಾರ ಹೆಚ್ಚಿರುವ ಕಾರಣ ನಮ್ಮ ಸಮಾಜವು ಬಿ.ಜೆ.ಪಿ. ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವ ತೀರ್ಮಾನ ಮಾಡಿದೆ ಎಂದರು.
ಕೆ.ಪಿ. ನಂಜುಂಡಿ ಇನ್ನೂ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಬಿಟ್ಟಿಲ್ಲ, ಯಾವ ಕಾರಣಕ್ಕೆ ಅವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ ಅವರು ಬಿಜೆಪಿಯಲ್ಲಿ ಇರಬೇಕಿತ್ತು ಎಂದರು.
ಈಗ ಬಿಜೆಪಿ ಪಕ್ಷವನ್ನು ನಾವು ಬೆಂಬಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ಆರ್ಥಿಕ ವಾಗಿ, ಸಾಮಾಜಿಕವಾಗಿ ಮುಖ್ಯ ವಾಗಿ ರಾಜಕೀಯವಾಗಿ ನಮಗೆ ಸ್ಥಾನಮಾನ ಗಳನ್ನು ಬಿಜೆಪಿ ಪಕ್ಷ ಕೊಡಬೇಕು ಎಂದು ಬಿಜೆಪಿ ಪಕ್ಷಕ್ಕೆ ಮನವಿ ಮಾಡಿದರು.