Thursday, 12th December 2024

Vishwavani Impact: ಎಚ್ಚೆತ್ತ ಜೆಜೆಎಂ ಅಧಿಕಾರಿಗಳು : ರಸ್ತೆ ಬದಿಯ ಹಳ್ಳ ಮುಚ್ಚಿ ರಸ್ತೆ ಸಂಚಾರಕ್ಕೆ ಅವಕಾಶ

ಗುಬ್ಬಿ: ತಾಲ್ಲೂಕಿನ ಚಿಕ್ಕ ಚೆಂಗಾವಿ ಗ್ರಾಮದ ಬಳಿ ರಸ್ತೆ ಬದಿ 600 ಮೀಟರ್ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ತೆಗೆದ ಹಳ್ಳ ಅಪಘಾತಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ನಮ್ಮವಿಶ್ವವಾಣಿಯಲ್ಲಿ  ಸುದ್ದಿ ಪ್ರಚಾರ ಅದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬದಿಯ ಹಳ್ಳವನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಕಳೆದ ಆರು ತಿಂಗಳ ಹಿಂದೆ ಜಲ ಜೀವನ್ ಮಿಷನ್ ಯೋಜನೆಯ ಮನೆ ಮನೆಗೆ ನಳ ಸಂಪರ್ಕ ಮಾಡುವ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವು ಕಡೆ ಪೈಪ್ ಲೈನ್ ಅಳವಡಿಸಿ ಉಳಿದಂತೆ ಹಾಗೆಯೇ ಹಳ್ಳ ಉಳಿಸಲಾಯಿತು. ಇದರಿಂದ ಗ್ರಾಮಸ್ಥರಿಗೆ ತೀವ್ರ ಅಸಮಾಧಾನ ತಂದಿತ್ತು. ಆರೇಳು ಅಪಘಾತಗಳು ಸಂಭವಿಸಿತು.

ಟ್ರ್ಯಾಕ್ಟರ್ ಈ ಹಳ್ಳಕೆ ಬಿದ್ದು ಚಾಲಕನ ಕೈ ಮೂಳೆ ಮುರಿತ ಅದ ಹಿನ್ನಲೆ ಗ್ರಾಮಸ್ಥರು ಕಳಪೆ ಕಾಮಗಾರಿ ಹಾಗೂ ಗುತ್ತಿಗೆದಾರನ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಒತ್ತಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದರು. ಈ ಹಿನ್ನಲೆ ಕೂಡಲೇ ಸ್ಥಳಕ್ಕೆ ಎಇಇ ನಟರಾಜ್ ಹಾಗೂ ಜೆಇ ಲಿಂಗರಾಜ್ ಶೆಟ್ಟಿ ಹಳ್ಳವನ್ನು ಮುಚ್ಚಿ ಮೂರು ತಿಂಗಳಲ್ಲಿ ಓವರ್ ಹೆಡ್ ಟ್ಯಾಂಕ್ ಹಾಗೂ ಪೈಪ್ ಲೈನ್ ಪೂರ್ಣ ಗೊಳಿಸುವ ಭರವಸೆ ನೀಡಿದರು.