Thursday, 12th December 2024

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸಿದೆ  

ಚಿಕ್ಕಬಳ್ಳಾಪುರ : ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸುವ ಸಲುವಾಗಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ವ್ಯಾಪಕ  ಜನ ಮನ್ನಣೆಯನ್ನು ಗಳಿಸಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ತಿಳಿಸಿದರು.

ಅವರು ಶನಿವಾರ ಜಿಲ್ಲಾಡಳಿತದಿಂದ ಮಂಚೇನಹಳ್ಳಿ  ಹೋಬಳಿಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.

ಕಂದಾಯ ಇಲಾಖೆಯ ಸೇವೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು  ಹಲವಾರು ಸುಧಾರಣೆಗಳನ್ನು ತರಲಾಗಿದೆ. ಬ್ರಿಟಿಷರ ಕಾಲದಿಂದ ಮುಂದುವರಿದಿದ್ದ ಹಲವಾರು ಕಾನೂನುಗಳಿಗೆ ಸುಧಾರಣೆ  ತಂದು ಜನಸ್ನೇಹಿಯಾಗಿಸಲಾಗಿದೆ. “ಹಲೋ  ಕಂದಾಯ ಸಚಿವರೇ ಯೋಜನೆ” ಮೂಲಕ ೭೨ ಗಂಟೆಯ ಒಳಗೆ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿಯನ್ನು ಮಂಜೂರು ಮಾಡುವ ವ್ಯವಸ್ಥೆ  ಜಾರಿ ಮಾಡಿದ್ದೇವೆ. ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ  ತಲುಪಿಸಿದ್ದೇವೆ.

ರೈತರು ವ್ಯವಸಾಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದ ದಾಖಲೆ ರಹಿತ ಜಮೀನುಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ಭೂ ಕಬಳಿಕೆ ಹಣೆಪಟ್ಟಿಯಿಂದ  ರೈತರನ್ನು ಮುಕ್ತಿಗೊಳಿಸಲಾಗುತ್ತಿದೆ. ಅರ್ಜಿ  ಸಲ್ಲಿಸಿದ  ಕನಿಷ್ಠ ೭ ದಿನಗಳ ಒಳಗೆ ಭೂ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ನಿರ್ಧಾರ ತೆಗೆದು ಕೊಂಡು  ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಮಿನಿ ವಿಧಾನ ಸೌಧಕ್ಕೆ ೧೫ ಕೋಟಿ

“ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ  ಮಂಚೇನಹಳ್ಳಿ  ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮದ ಸರ್ವಾಂಗಿಣ  ಅಭಿವೃದ್ಧಿಗೆ  ಒಂದು ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಈ ಹಣದಲ್ಲಿ ಏನೆಲ್ಲಾ ಕಾಮಗಾರಿಗಳು  ಆಗಬೇಕೋ ಆ ಎಲ್ಲಾ ಕಾರ್ಯಗಳಿಗೂ ಈ ಹಳ್ಳಿಯ ಜನರ ಮಧ್ಯೆಯೇ ಇಂದೇ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸಲಾಗುವುದು. ಈ  ಕಾರ್ಯಕ್ರಮ  ನನಗೆ  ಪಾಠಶಾಲೆಯಾಗಿದ್ದು  ಜನರ  ಭವಣೆಗಳನ್ನು  ಹತ್ತಿರದಿಂದ  ಆಲಿಸಿ  ಪರಿಹರಿಸಲು  ನೆರವಾಗಿದ.ನೂತನವಾಗಿ ರಚನೆಯಾಗಿರುವ ಮಂಚೇನಹಳ್ಳಿ ತಾಲ್ಲೂಕು ಆಡಳಿತ ಕೇಂದ್ರವಾದ  ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ೧೫ ಕೋಟಿ   ಅನುದಾನ  ನೀಡಲು ಹಾಗೂ ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ ೨೨ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನಗಳನ್ನು ಸದ್ಯದಲ್ಲೆ ವಿತರಿಸಲು ಸ್ಥಳದಲ್ಲಿಯೇ ಮಂಜೂರಾತಿ ನೀಡಿರುವುದಾಗಿ  ಕಂದಾಯ ಸಚಿವರು ಘೋಷಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ  ಸಚಿವ ಡಾ.ಕೆ.ಸುಧಾಕರ್ ಅವರು ಮಾತನಾಡುತ್ತಾ, ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇದ್ದಂತಹ  ತೊಡಕುಗಳನ್ನು ನಿವಾರಿಸುವಲ್ಲಿ ಕಂದಾಯ ಸಚಿವರು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾತೃ ಇಲಾಖೆಯಾದ  ಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಮೂಲಕ ಸರ್ಕಾರದ ಎಲ್ಲಾ ಇಲಾಖೆಯ ಸೇವೆಗಳನ್ನು ಗ್ರಾಮೀಣ ಭಾಗದ ಜನರ ಬಳಿಗೆ ತಲುಪಿಸಲು ಬಹಳಷ್ಟು ಸಹಕಾರಿಯಾಗಿದೆ ಎಂದರು.

ರಾಜ್ಯದಲ್ಲೇ ದಾಖಲೆ

ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ ೨೨ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನಗಳನ್ನು ಸದ್ಯದಲ್ಲೆ ವಿತರಿಸಲು ಸ್ಥಳದಲ್ಲಿಯೇ ಮಂಜೂರಾತಿ ನೀಡಿರುವುದಾಗಿ  ಕಂದಾಯ ಸಚಿವರು ಘೋಷಿಸಿದ್ದಾರೆ ಅದರಂತೆ  ಕ್ಷೇತ್ರದ ಕಡುಬಡವರಿಗೆ ಆದ್ಯತೆಯ ಮೇಲೆ  ವಿತರಿಸಲಾಗುವುದು. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ರೀತಿಯ ನಿವೇಶನ ಹಂಚಿಕೆಯು ರಾಜ್ಯದ ಯಾವ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರಲಿಕ್ಕಿಲ್ಲ  ಇದೊಂದು ದಾಖಲೆಯಾಗಲಿದೆ.

ಎತ್ತಿನ ಹೊಳೆಗೆ ೨೩ ಸಾವಿರ ಕೋಟಿ

ಈ  ಭಾಗದಲ್ಲಿನ  ಭವಣೆಯನ್ನು  ನೀಗಿಸಲು  ಪ್ರಗತಿಯಲ್ಲಿರುವ  ಎತ್ತಿನಹೊಳೆ   ಕುಡಿಯುವ  ನೀರಿನ  ಯೋಜನೆಯ ಕಾಮಗಾರಿ ಗಳಿಗೆ  ೨೩ ಸಾವಿರ  ಕೋಟಿ  ಅನುದಾನವನ್ನು  ಬಿಡುಗಡೆ  ಮಾಡಲು ಸದ್ಯದಲ್ಲೇ  ಸಚಿವ ಸಂಪುಟ  ಸಭೆ  ಕರೆದು  ಮುಖ್ಯಮಂತ್ರಿ ಗಳು  ನಿರ್ಧಾರ  ಕೈಗೊಳ್ಳಲಿದ್ದಾರೆ  ಎಂದರು.

ಕಾರ್ಯಕ್ರಮದಲ್ಲಿ ಪೌರಾಡಳಿತ  ಮತ್ತು  ಸಣ್ಣ  ಕೈಗಾರಿಕೆ ಹಾಗೂ ಚಿಕ್ಕಬಳ್ಳಾಪುರ   ಜಿಲ್ಲಾ  ಉಸ್ತುವಾರಿ  ಸಚಿವ ಎನ್.ನಾಗ ರಾಜ್   ಮಾತನಾಡಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”ಗ್ರಾಮೀಣ  ಜನರಿಗೆ  ನೇರವಾಗಿದೆ.ಕಂದಾಯ  ಇಲಾಖೆಯ ಸೇವೆಗಳನ್ನು  ಜನರಿಗೆ  ತಲುಪಿಸಲು  ಕಾನೂನು ಸರಳೀಕರಣ  ಮಾಡಿದೆ ಈ  ನಿಟ್ಟಿನಲ್ಲಿ  ಮತ್ತಷ್ಟು  ಸರಳೀಕರಣದ  ಅಗತ್ಯತೆ  ಇದೆ  ಎಂದು  ಕಂದಾಯ  ಸಚಿವರಲ್ಲಿ  ಮನವಿ  ಮಾಡಿದರು.

ಕಾರ್ಯಕ್ರಮದಲ್ಲಿ  ಸರ್ಕಾರದ ವಿವಿಧ  ಯೋಜನೆಗಳ ಫಲಾನುಭವಿಗಳಿಗೆ  ಸೌಲಭ್ಯಗಳು, ಮಂಜೂರಾತಿ  ಪತ್ರಗಳು, ಕಾರ್ಯಾ ದೇಶ  ಪಾತ್ರಗಳನ್ನು  ಸಚಿವರುಗಳು  ವಿತರಣೆ  ಮಾಡಿದರು. ವೇದಿಕೆ  ಕಾರ್ಯಕ್ರಮದ  ನಂತರ ಸ್ಥಳೀಯ ಸಾರ್ವಜನಿಕರಿಂದ  ೨೩೦ ಅಹವಾಲುಗಳನ್ನು ಸ್ವೀಕರಿಸಿದರು.ಈ  ಪೈಕಿ  ಬಹುತೇಕ ಅರ್ಜಿಗಳನ್ನು  ಸ್ಥಳದಲ್ಲಿಯೇ  ಇತ್ಯರ್ಥಪಡಿಸಿ  ಬಾಕಿ  ಅರ್ಜಿಗಳನ್ನು  ಕಾಲಮಿತಿಯಲ್ಲಿ  ವಿಲೇವಾರಿ  ಮಾಡಲು  ಅಧಿಕಾರಿಗಳಿಗೆ  ಸೂಚನೆಗಳನ್ನು  ನೀಡಿದರು.

“ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮಕ್ಕೂ ಮುನ್ನ ಮಂಚೇನಹಳ್ಳಿ ತಾಲ್ಲೂಕಿನ ನುಲಗುಮ್ಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಕಂದಾಯ ಸಚಿವರಾದ ಆರ್.ಅಶೋಕ,  ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ನಾಗರಾಜ್ (ಎಂಟಿಬಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ರವರಿಗೆ ೧೫೦ ಕೆಜಿಗೂ   ಹೆಚ್ಚು  ತೂಕದ ಕನಕಾಂಬರದ  ಬೃಹತ್  ಹೂವಿನ ಹಾರ ಹಾಕುವ ಮೂಲಕ  ಭವ್ಯ  ಸ್ವಾಗತ ನೀಡಿದರು.ಗ್ರಾಮದ ಮಹಿಳೆಯರು ಪೂರ್ಣ ಕುಂಭದೊ0ದಿಗೆ  ಸಚಿವರನ್ನು ಬರಮಾಡಿಕೊಂಡರು. ನಂತರ ನುಲಗುಮ್ಮನಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು  ಗ್ರಾಮ ವಾಸ್ತವ್ಯದ  ಕಾರ್ಯಕ್ರಮಗಳಿಗೆ  ಚಾಲನೆ  ನೀಡಿದರು.

ನುಲಗುಮ್ಮನಹಳ್ಳಿ ಗ್ರಾಮದಿಂದ ಜರಬಂಡಹಳ್ಳಿಯ ವೇದಿಕೆ ಸ್ಥಳದವರೆಗೆ  ಸಚಿವರನ್ನು ಎತ್ತಿನಗಾಡಿ ಮೂಲಕ ಕಲಾತಂಡಗಳೊAದಿಗೆ  ಮೆರವಣಿಗೆ ಮೂಲಕ ಕರೆತರಲಾಯಿತು.ಮೆರವಣಿಗೆ ಮುಗಿಸಿದ ಸಚಿವರುಗಳು ಜಿಲ್ಲಾಡಳಿತದ ವಿವಿಧ ಇಲಾಖೆಗಳು ತೆರೆದಿರುವ ಮಳಿಗೆಗಳು, ಶಿಬಿರಗಳು, ನೋಂದಣಿ ಕೇಂದ್ರಗಳು ಮತ್ತು ಕೃಷಿ, ತೋಟಗಾರಿಕೆ, ರೆಷ್ಮೇ, ಪಶುಪಾಲನಾ  ಸೇವಾ ಸೌಲಭ್ಯಗಳ ವಸ್ತುಪ್ರದರ್ಶನಗಳಿಗೆ ಚಾಲನೆ ನೀಡಿದರು.

ನಂತರ  ಸಿರಿಧಾನ್ಯಗಳ ರಾಶಿ ಪೂಜೆ ಮಾಡಿದ ಕಂದಾಯ ಸಚಿವರು ವೇದಿಕೆ ಕಾರ್ಯಕ್ರಮದಲ್ಲಿ ಸಂವಿದಾನ ದಿನಾಚರಣೆಯ ಅಂಗವಾಗಿ ಭಾರತ ರತ್ನ,ಡಾ.ಅಂಬೆಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿದಾನದ ಪೀಠಿಕೆಯನ್ನು ಸ್ವತಃ ಕಂದಾಯ ಸಚಿವರು ಭೋದಿಸಿದರು.

ಅರಳಿ ಕಟ್ಟೆಯಲ್ಲಿ  ಕಂದಾಯ ಸಚಿವರಿಂದ  ರೈತರೊಂದಿಗೆ  ಸಂವಾದ
ಜರಬAಡಹಳ್ಳಿಯ  ಗ್ರಾಮ ಪಂಚಾಯತಿ ವ್ಯಾಪ್ತಿಯ  ಹನುಮಂತಪುರ ಗ್ರಾಮದಲ್ಲಿರುವ ಅರಳಿ ಕಟ್ಟೆಯ ಬಳಿ  ಕಂದಾಯ ಸಚಿವ  ಆರ್.ಅಶೋಕ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ  ಡಾ.ಕೆ.ಸುಧಾಕರ್ ಅವರು ಗ್ರಾಮ ಸಭೆ ನಡೆಸಿ ಗ್ರಾಮಸ್ಥರು  ಹಾಗೂ  ರೈತರೊಂದಿಗೆ  ಸಂವಾದ ನಡೆಸಿದರು. ಈ ವೇಳೆ ಹನುಮಂತಪುರ ಗ್ರಾಮಕ್ಕೆ ಮುಂದಿನ ವಾರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕಲ್ಪಿಸಲು  ಸಚಿವರು  ಸ್ಥಳದಲ್ಲೇ  ಸೂಚನೆ  ನೀಡಿದರು. ಗ್ರಾಮಕ್ಕೆ ಸ್ಮಶಾನ ಭೂಮಿ  ಮಂಜೂರಾತಿಗೆ  ಹಾಗೂ  ಯುವಕರಿಗೆ ಆಟದ ಮೈದಾನ  ಮಂಜೂರಾತಿಗೆ  ಸಚಿವರು ಕ್ರಮ  ತೆಗೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಚಿಕ್ಕಬಳ್ಳಾಪುರ   ನಗರ ಸಭೆ  ಅಧ್ಯಕ್ಷ ಆನಂದ  ರೆಡ್ಡಿ  ಬಾಬು, ಜರಬಂಡಹಳ್ಳಿ ಗ್ರಾಮ  ಪಂಚಾಯತ್ ನ  ಅಧ್ಯಕ್ಷ ಶ್ರೀನಾಥ್  ಬಾಬು, ಗ್ರಾ.ಪಂ  ಸದಸ್ಯರು,    ಗೌರಿಬಿದನೂರು  ತಾಲೂಕು ತಹಸೀಲ್ದಾರ್  ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಯ  ಜಿಲ್ಲಾ  ಮತ್ತು  ತಾಲೂಕು  ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.