Friday, 22nd November 2024

ಚಕ್ರತೀರ್ಥ ಗಡಿಪಾರು ಮಾಡುವಂತಹ ಅಪರಾಧ ಏನು ಮಾಡಿದ್ದಾರೆ?

#ARagaJnanendra

ತುಮಕೂರು: ಯಾರೋ ಏನೋ ಹೇಳುತ್ತಾರೆ ಎಂದು ಗಡಿಪಾರು ಮಾಡಲು ಆಗುವುದಿಲ್ಲ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಗಡಿಪಾರು ಮಾಡುವಂತಹ ಅಪರಾಧ ಏನು ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಪ್ರಶ್ನಿಸಿದರು.

“ಗಡಿಪಾರು ಮಾಡಬೇಕೆಂದರೆ ಅದಕ್ಕೆ ಆದಂತಹ ನಿಯಮಾವಳಿಗಳಿವೆ. ಈ ರೀತಿ ಮಾತನಾಡುವವರಿಗೆ ನಿಯಮಾವಳಿಗಳ ಬಗ್ಗೆ ಗೊತ್ತಿಲ್ಲ. ರೋಹಿತ್ ಚಕ್ರತೀರ್ಥ ಗಡಿಪಾರು ಆಗುವಂತಹ ಅಪರಾಧ ಏನು ಮಾಡಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಯಾರೋ ಏನೋ ಹೇಳುತ್ತಾರೆ ಎಂದು ಅದನ್ನೆಲ್ಲ ಕೇಳಲು ಸಾಧ್ಯವಿಲ್ಲ” ಎಂದು ಹೇಳಿದರು.

ಬಸವಣ್ಣನ ಪಠ್ಯ ತಿರುಚಲಾಗಿದೆ ಎಂದು ಸ್ವಾಮೀಜಿಯವರು ಸಿಟ್ಟಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಶಿಕ್ಷಣ ಸಚಿವರು ಉತ್ತರ ಕೊಟ್ಟಿದ್ದಾರೆ. ಅಲ್ಲದೇ ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾತ್ರಿ ರಾಜ್ಯದ ಜಿಎಸ್ಟಿ ಪಾಲನ್ನು ರಾಜ್ಯ ಸರ್ಕಾರಕ್ಕೆ ಜಮಾ ಮಾಡಿದೆ. ನಮ್ಮ ರಾಜ್ಯದ ಜಿ.ಎಸ್.ಟಿ ಪಾಲನ್ನು ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, “ಕುವೆಂಪು ಗೀತೆಗಳನ್ನು ನಾಡಗೀತೆಗಳ ನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ.‌ ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನು ಹಿಡಿದು ನೇತಾಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪುರವರಿಗೆ ನಾವು ಅವಮಾನ ಮಾಡಿಲ್ಲ. ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಏನು ಸರಿಮಾಡಬೇಕು ಎಂದು ಸಲಹೆ ಕೊಡಲಿ” ಎಂದು ತಿಳಿಸಿದ್ದಾರೆ.

ಬಿಜೆಪಿ ಸಂಸದ ಪ್ರತಾಪಸಿಂಹ, ರೋಹಿತ್ ಚಕ್ರತೀರ್ಥ ಅವರಿಂದ ಕುವೆಂಪು ಮತ್ತು ನಾಡಗೀತೆಗೆ ಅವಮಾನವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.