ಬೆಂಗಳೂರು: “ಕುಡಿಯುವ ನೀರಿನ ದಂಧೆ ತಡೆಗಟ್ಟಿ ನೀರಿನ ಅಭಾವವನ್ನು ನೀಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆಲವರು ರಾಜಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರಿಗೆ ರಾಜಕಾರಣ ಮಾಡಬೇಡಿ ಎಂದು ಹೇಳುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಹೇಳಿದ್ದಿಷ್ಟು:
“ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ ನೀರಿನ ಕೊರತೆ ಇಲ್ಲ, ಕೊಳವೆ ಬಾವಿಗಳ ಬತ್ತಿರುವುದರಿಂದ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗಿದೆ. ಈ ನೀರಿನ ಅಭಾವ ನೀಗಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಕಳೆದ 30-40 ವರ್ಷಗಳಲ್ಲಿ ಇಂತಹ ಭೀಕರ ಬರಗಾಲವನ್ನು ನಾವು ನೋಡಿರಲಿಲ್ಲ. ಬೆಂಗಳೂರಿನಲ್ಲಿರುವ 13,900 ಕೊಳವೆ ಬಾವಿಗಳಲ್ಲಿ 6,900 ಕೊಳವೆ ಬಾವಿ ಬತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನೇ ಅವಲಂಬಿಸಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ಖಾಸಗಿ ನೀರಿನ ಟ್ಯಾಂಕರ್ ಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ನೀರು ಪೂರೈಸಲು ಮುಂದಾಗಿದ್ದೇವೆ.
ನೀರಿನ ಪೂರೈಕೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ನಾವು ತಡೆದಿದ್ದೇವೆ. ಜನರಿಗೆ ಸೂಕ್ತ ದರದಲ್ಲಿ ನೀರು ಸಿಗುವಂತೆ ಮಾಡಿದ್ದೇವೆ. ಕೆಲವು ಕೊಳಗೇರಿ ಪ್ರದೇಶದಲ್ಲಿ ಉಚಿತವಾಗಿ ನೀರು ನೀಡುತ್ತಿದ್ದೇವೆ. ಉಳಿದಂತೆ ಅಪಾರ್ಟ್ ಮೆಂಟ್ ಗಳಿಗೆ ಪೂರೈಸುವ ನೀರಿಗೆ ದರ ನಿಗದಿ ಮಾಡಿದ್ದು, ಕೈಗಾರಿಕೆಗಳ ಬಳಕೆಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಈಗಾಗಲೇ 1500ಕ್ಕೂ ಹೆಚ್ಚು ಟ್ಯಾಂಕರ್ ಗಳನ್ನು ನೋಂದಣಿ ಮಾಡಲಾಗಿದ್ದು, ಬೇರೆಯವರಿಗೆ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶ ನೀಡಿದ್ದೇವೆ. ಪೊಲೀಸ್, ಆರ್ ಟಿಓ, ಪಾಲಿಕೆ ಅವರಿಗೆ ಸೂಚನೆ ನೀಡಿ ನೋಂದಾಯಿತ ಟ್ಯಾಂಕರ್ ಗಳ ಮೇಲೆ ಸರ್ಕಾರದ ನಾಮಫಲಕ ಅಳವಡಿಸುವಂತೆ ಮಾಡುತ್ತೇವೆ. ಆಮೂಲಕ ಸರ್ಕಾರದ ನಿಯಂತ್ರಿತ ಕಾನೂನುಬಾಹಿರವಾಗಿ ಜನರಿಂದ ವಸೂಲಿ ಮಾಡುವುದನ್ನು ತಡೆಗಟ್ಟಲು ಮುಂದಾಗಿದ್ದೇವೆ. ಬೆಂಗಳೂರಿನ ಸುತ್ತಮುತ್ತಲು ಇರುವ ನೀರಾವರಿ ಕೊಳವೆ ಬಾವಿಯನ್ನು ನಾವು ಗುರುತಿಸಿದ್ದು, ಅಗತ್ಯ ಬಿದ್ದರೆ ಅವು ಗಳನ್ನು ಬಳಸಿಕೊಳ್ಳುತ್ತೇವೆ. ಇನ್ನು ಬೆಂಗಳೂರಿನ ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುತ್ತೇವೆ.”
ತಮಿಳುನಾಡಿಗೆ ನೀರು ಬಿಟ್ಟಿಲ್ಲ:
ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ತಮಿಳುನಾಡಿಗೆ ನೀರು ಬಿಟ್ಟಿರುವ ಆರೋಪ ಸುಳ್ಳು. ತಮಿಳುನಾಡಿಗೆ ಈ ಸಂದರ್ಭದಲ್ಲಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬಿಡುವುದೂ ಇಲ್ಲ. ತಮಿಳುನಾಡಿಗೆ ಹೋಗುವ ಪ್ರತಿಯೊಂದು ನೀರಿನ ಲೆಕ್ಕ ದಾಖಲಾಗಿರುತ್ತದೆ. ನಾವು ಬಿಜೆಪಿಯವರಂತೆ ಮೂರ್ಖರಲ್ಲ. ನಾವು ನೀರಿನ ವಿಚಾರದಲ್ಲಿ ಜವಾಬ್ದಾರಿ ಹೊಂದಿದ್ದೇವೆ. ಕಾವೇರಿ ಭಾಗದ ರೈತರನ್ನು ನಾವು ಈ ಹಿಂದೆಯೂ ಕಾಪಾಡಿದಿದ್ದೇವೆ. ಈಗಲೂ ಕಾಪಾಡುತ್ತಿದ್ದೇವೆ. ತಮಿಳುನಾಡು ನೀರು ಕೇಳುತ್ತಿಲ್ಲದಿರುವಾಗ ನಾವು ಯಾಕೆ ಅವರಿಗೆ ನೀರನ್ನು ಬಿಡೋಣ? ಕುಡಿಯುವ ನೀರಿನ ಪೂರೈಕೆ ನಮ್ಮ ಸರ್ಕಾರದ ಮೊದಲ ಆದ್ಯತೆ. ಶಿವ ಡ್ಯಾಂ ನಲ್ಲಿ ನೀರಿನ ಮಟ್ಟ 2 ಅಡಿ ಕಡಿಮೆ ಇದ್ದ ಕಾರಣ ಬೆಂಗಳೂರಿಗೆ ಪೂರೈಸಲು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆಯನ್ನು ತುಂಬಲು ಬಿಡಬ್ಲ್ಯೂಎಸ್ಎಸ್ ಬಿ ಮನವಿ ಮೇರೆಗೆ ಕೆಆರ್ ಎಸ್ ನಿಂದ ನೀರು ಹರಿಸಿದ್ದೇವೆಯೇ ಹೊರತು, ತಮಿಳುನಾಡಿಗೆ ನೀರು ಹರಿಸಿಲ್ಲ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಯೊಜನೆಯೊಂದೇ ಶಾಶ್ವತ ಪರಿಹಾರವಾಗಿದೆ. ಆದರೆ ಸದ್ಯದ ಮಟ್ಟಿಗೆ ನೀರಿನ ಅಭಾವ ನೀಗಿಸಲು ಹಾಲಿ ಇರುವ ಕೊಳವೆ ಬಾವಿಗಳನ್ನು ಮರು ಕೊರೆಯುವುದು, ಹೊಸ ಕೊಳವೆ ಬಾವಿ ಕೊರೆಯಲು ತೀರ್ಮಾನಿಸಿದ್ದೇವೆ. ಕೈಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲರಿಗೂ ನೀರು ಪೂರೈಸುತ್ತೇವೆ. ಇದ್ಕಾಗಿ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಭಾಗದ ಹಳ್ಳಿಗಳ ರೈತರ ಜತೆಗೂ ಒಪ್ಪಂದ ಮಾಡಿಕೊಂಡು ಅವರ ಕೊಳವೆ ಬಾವಿ ಬಳಸಿಕೊಳ್ಳಲಾಗುವುದು. ಕೆಲವು ಬುದ್ಧಿವಂತರು ಸ್ನಾನಕ್ಕೂ ನೀರಿಲ್ಲ ಎಂದು ಟ್ವೀಟ್ ಮಾಡುತ್ತಾರೆ. ಈ ಮಧ್ಯೆ ವಾರ್ಡ್, ವಲಯ ಮಟ್ಟದಲ್ಲಿ ಕಾಲ್ ಸೆಂಟರ್ ಗಳನ್ನು ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನ ಇತಿಹಾಸದಲ್ಲೇ ಇಷ್ಟು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಯಾವ ಸರ್ಕಾರವೂ ಮಾಡಿರಲಿಲ್ಲ.
ಮಾಧ್ಯಮಗಳು ತೋರಿಸುತ್ತಾರೆ ಎಂದು ಬಿಜೆಪಿಯವರು ನೀರಿನ ಹಾಹಾಕಾರ ಸೃಷ್ಟಿಸುತ್ತಿದ್ದಾರೆ. ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ಅನುದಾನ ಇಟ್ಟಿದ್ದ ಬಿಜೆಪಿ ಸರ್ಕಾರ ಅದನ್ನು ಹಿಂಪಡೆದಿದ್ದು ಯಾಕೆ? ಕೇಂದ್ರ ಸರ್ಕಾರದ ಬಳಿ ಎಲ್ಲಾ ಸಂಸದರು ಹೋಗಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ನಾವು ತಮಿಳುನಾಡಿಗೆ ಬಿಡುಗಡೆ ಮಾಡುವ ನೀರನ್ನು ಬಿಡುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರು ವುದು ನಮ್ಮ ವಿರುದ್ಧವಲ್ಲ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು. ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿಸಲಿ.
ನಮ್ಮ ಸರ್ಕಾರಕ್ಕೆ ಬದ್ಧತೆ ಇರುವ ಕಾರಣ ಮೇಕೆದಾಟು ಯೋಜನೆ ಜಾರಿಗೆ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಾಗ ಗುರುತಿಸಲಾಗಿದೆ. ಬದ್ಧತೆ ಇರುವ ಕಾರಣಕ್ಕೆ ನಾವು ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಈ ಯೋಜನೆಗಳನ್ನು ಮಾಡಲೇ ಬೇಕು ಅಂತಲೇ ನಾನು ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ.
ಬಿಜೆಪಿ ಆಂತರಿಕ ಧ್ವನಿಯನ್ನು ಅನಂತ ಕುಮಾರ್ ಹೆಗಡೆ ಬಹಿರಂಗಪಡಿಸಿದ್ದಾರೆ
ಅನಂತಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಈ ಹೇಳಿಕೆಯಿಂದ ಅಂತಹ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ಇದೇ ಮೊದಲಲ್ಲ. ಹಾಗಿದ್ದರೆ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಂಡಿರುವುದೇಕೆ? ಅವರ ವಿರುದ್ಧ ಯಾವ ಕ್ರಮ ಕೈಗೊಂಡಿ ದ್ದಾರೆ? ಅವರು ಕೇಂದ್ರದ ಮಾಜಿ ಸಚಿವರು, ಹಾಲಿ ಸಂಸದರು. ಅವರ ವಿರುದ್ಧ ಬಿಜೆಪಿ ಏನಾದರೂ ಕ್ರಮ ಕೈಗೊಂಡಿದ್ದಾರಾ? ಇಲ್ಲ. ಬಿಜೆಪಿ ಪಕ್ಷದ ಚಿಂತನೆ ಆಧಾರದ ಮೇಲೆ ಅವರ ಪಕ್ಷದ ಸಂಸದರು ಮಾತನಾಡುತ್ತಿದ್ದಾರೆ.
ಡಿ.ಕೆ.ಸುರೇಶ್ ಅವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಆಗ್ರಹಿಸಿದಾಗ, ಆ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾ ಮನ್ ಅವರು ಯಾಕೆ ಮಾತನಾಡಿದರು? ಈಗ ಈ ಬಗ್ಗೆ ಪ್ರಧಾನಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ. ಬಿಜೆಪಿಯ ಆಂತರಿಕ ಧ್ವನಿಯನ್ನು ಅನಂತ ಕುಮಾರ್ ಹೆಗಡೆ ಹೊರಹಾಕಿದ್ದಾರೆ. ಬಿಜೆಪಿಗೆ ದೇಶದ ಐಕ್ಯತೆ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಅನಂತ ಕುಮಾರ್ ಹೆಗಡೆ ಅವರನ್ನು ಉಚ್ಛಾಟನೆ ಮಾಡಬಹುದಾಗಿತ್ತು. ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ” ಎಂದರು.
ಅಭ್ಯರ್ಥಿಗಳ ಆಯ್ಕೆ ಅಧಿಕಾರ ಹೈಕಮಾಂಡ್ ನಾಯಕರದ್ದು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಕೇಳಿದಾಗ, “ಇಂದು ಸಂಜೆ ನಾವು ಸಭೆ ಮಾಡುತ್ತಿದ್ದು, ನಂತರ ಹೆಸರುಗಳನ್ನು ನಾವು ದೆಹಲಿಗೆ ನೀಡಬೇಕು. ಅಭ್ಯರ್ಥಿಗಳ ಪಟ್ಟಿ ಘೋಷಣೆ ಹಕ್ಕು ನಮಗಿಲ್ಲ. ಹೈಕಮಾಂಡ್ ನಾಯಕರು ಚುನಾವಣಾ ಸಮಿತಿ ಸಭೆ ನಡೆಸಿ ನಮ್ಮ ಪ್ರಸ್ತಾವನೆಯನ್ನು ಒಪ್ಪಬಹುದು ಅಥವಾ ನಿರಾಕರಿಸಬಹುದು. ಅವರದೇ ಆದ ಹೆಸರು ಸೇರಿಸ ಬಹುದು” ಎಂದು ತಿಳಿಸಿದರು.