Sunday, 15th December 2024

ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಡಿ.4ರಂದು

ಕಲಬುರಗಿ: ಕರ್ನಾಟಕ ಪ್ರಾಂತ ರೈತ ಸಂಘದಿಂದ ಡಿ.4ರಂದು ಬೆಳಗ್ಗೆ 11ಕ್ಕೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತ ನಾಡಿದರು. ಬೀದರ್, ಕಲಬುರಗಿ,ಯಾದಗಿರಿ, ರಾಯಚೂರು, ವಿಜಯಪುರ ಸೇರಿ ಸುಮಾರ 1500ಕ್ಕೂ ಹೆಚ್ಚು ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ಧಾವಲೆ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದು, ರಾಜ್ಯ ಉಪಾ ಧ್ಯಕ್ಷ ಯು.ಬಸವರಾಜ ಹಾಗೂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
ಈಗಾಗಲೇ ತೊಗರಿ 4,80,645 ಹೆಕ್ಟೇರ್ ಬಿತ್ತನೆ ಮಾಡಿದ್ದಾರೆ. ಆದರೆ ಅತಿವೃಷ್ಟಿ ಮಳೆ ಯಿಂದ 150000 ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ. ತೊಗರಿ ಬೆಳೆಗಾರರ ಬದುಕು ಬಿದಿಗೆ ಬಂದಂತಾಗಿದೆ. ಈಗಾಗಲೆ ಮಡ್ಡಿ ಭೂಮಿ, ಖರಾಬು ಭೂಮಿ ತೇವಾಂಶ ಕಡಿಮೆಯಾಗಿ ಅಥವಾ ತೊಗರಿ ಗೊಡ್ಡು ರೋಗದಿಂದ ಒಣಗಿ ಹೋಗುತ್ತಿದೆ. ಹೀಗಾಗಿ ತೊಗರಿ ಬೆಳೆಗಾರರ ರೈತರ ಮೇಲೆ ಬರೆ ಬಿದ್ದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೀಗಾಗಿ ಪ್ರತಿ ಎಕರೆಗೆ ರೂ.25 ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಬೆಳೆ ಪ್ರಸಿದ್ಧಿಯಾಗಿದೆ. ಅಡಿಕೆ ಬೆಳೆಗಾರರು, ತೆಂಗು ಬೆಳೆಗಾರರು ಇನ್ನೊಂದು ಕಡೆ ಕಾಫಿ ಬೆಳೆಗಾರರು. ಕಾಫಿ ಬೋರ್ಡ್ ಬಲವರ್ಧನೆಗಾಗಿ ರಾಜ್ಯ ಸರಕಾರ ತೋರಿಸಿದ ಕಾಳಜಿ ತೊಗರಿ ಕಣಜ ನಾಡಿಗೂ ಕಾಳಜಿ ತೋರಿಸಿ ತೊಗರಿ ಬೋರ್ಡ್ ಬಲವರ್ಧನೆ ಮಾಡಬೇಕು ಎಂದು ಆಗ್ರಹಿಸಿದರು.

ತೊಗರಿ ಬೆಲೆ ಕುಸಿತವಾದಾಗ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರೀಕರಣ ಮಾಡಬೇಕು. ತೊಗರಿ ಮತ್ತು ತೊಗರಿ ಬೇಳೆ ಅವುಗಳ ಉತ್ಪನ್ನವನ್ನುಅಭಿವೃದ್ಧಿಪಡಿಸಬೇಕು. ತೊಗರಿಯಲ್ಲಿ ಹೊಸ ತಂತ್ರಜ್ಞಾನ ಹೆಚ್ಚಿಸಬೇಕು. ತೊಗರಿ ಸಂಶೋಧನೆಗೆ ಪ್ರೋತ್ಸಾಹಿಸ ಬೇಕು. ತೊಗರಿ ಮಂಡಳಿ ಕೆಎಂಎ್ ಮಾದರಿಯಂತೆ ಕೆಲಸ ಮಾಡಬೇಕು. ತೊಗರಿ ಮಂಡಳಿ ರೈತರಿಂದ ತೊಗರಿ ಖರೀದಿಸಿ ಅದರ ಉತ್ಪನ್ನಗಳನ್ನು ತಯಾರಿಸುವಂತೆ ಆಗಬೇಕು. ಕ್ಷೀರಭಾಗ್ಯದ ಅಡಿ ಶಾಲೆಗಳಿಗೆ ಹಾಲು ನೀಡುವಂತೆ ಅಕ್ಷರ ದಾಸೋಹ ಆಡಿ ತೊಗರಿ ಬೇಳೆ ಪೂರೈಸುವಂತಾಗಬೇಕು. ಮಂಡಳಿ ಬಲವರ್ಧನೆಗೆ ಕನಿಷ್ಠ ರೂ.25 ಕೋಟಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುಬಾಷ ಜೇವರ್ಗಿ, ಎಂ.ಬಿ.ಸಜ್ಜನ್, ಅಲ್ತಪ್ ಇನಾಂದಾರ್, ಜಾವೇದ್ ಹುಸೇನ್ ಇತರರಿದ್ದರು.