Saturday, 14th December 2024

ಚಿ.ನಾ.ಹಳ್ಳಿಯಲ್ಲಿ ಸಿದ್ದರಾಮಯ್ಯ ನಿಲ್ಲದಿದ್ದರೆ ಸ್ಥಳಿಯರಿಗೆ ಟಿಕೆಟ್ ನೀಡಿ : ವೈಸಿಎಸ್

ಚಿಕ್ಕನಾಯಕನಹಳ್ಳಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸ್ವಾಗತ ಮಾಡಿ ಗೆಲ್ಲಿಸುತ್ತೇವೆ. ಒಂದು ವೇಳೆ ಸಿದ್ದರಾಮಯ್ಯ ನವರು ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧೆ ಮಾಡದಿದ್ದರೆ ಸ್ಥಳೀಯರಿಗೆ ಟಿಕೆಟ್ ನೀಡ ಬೇಕೆಂದು ಕೆಪಿಸಿಸಿ ಸದಸ್ಯ ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೈ.ಸಿ.ಸಿದ್ದರಾ ಮಯ್ಯ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಿದ್ದರಾಮ ಯ್ಯನವರು ಇಲ್ಲಿ ಸ್ಪರ್ಧಿಸಿದರೆ ನೂರಕ್ಕೆ ನೂರ ಒಂದರಷ್ಟು ಗೆಲುವಿನ ಸಾಧ್ಯತೆ ಇದ್ದು ನಾವುಗಳು ಸಂತೋಷದಿAದ ಬರಮಾಡಿಕೊಂಡು ಗೆಲ್ಲಿಸಿಕೊಂಡು ಬರುತ್ತೇವೆ.

ಆದರೆ ಸಿದ್ದರಾಮಯ್ಯನವರು ಇಲ್ಲಿ ಸ್ಪರ್ಧೆ ಮಾಡದಿದ್ದರೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಟಿಕೆಟ್ ನೀಡಬಾರದು. ಸ್ಥಳೀಯರಾದ ಕೆಪಿಸಿಸಿ ಸದಸ್ಯ ಸಿದ್ದರಾಮಯ್ಯ, ಮಾಜಿ ಶಾಸಕ ಲಕ್ಕಪ್ಪ, ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಡಾ.ಪರಮೇಶ್ವರ್, ಶಿರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು, ರೇಣುಕಯ್ಯ, ಇವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕೆಂದು ಇದೇ ವೇಳೆ ಒತ್ತಾಯಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿಗೆ ಬಿಜೆಪಿ ಪಕ್ಷದಲ್ಲಿ ಅಭದ್ರತೆ ಕಾಡುತ್ತಿದೆ. ಮಾಜಿ ಶಾಸಕ ಕಿರಣ್‌ಕುಮಾರ್ ಅವರೊಂದಿಗಿನ ಭಿನ್ನ ಮತ ಈಗಾಗಲೇ ಬಹಿರಂಗವಾಗಿದೆ. ಬಿಜೆಪಿ ಟಿಕೆಟ್‌ಗಾಗಿ ಇಬ್ಬರಲ್ಲೂ ಪೈಪೋಟಿ ಶುರುವಾಗಿದೆ. ಜೆಸಿಎಂಗೆ ಆ ಅಭದ್ರತೆ ಕಾಡುತ್ತಿರ ಬಹುದು. ನಿಮ್ಮ ಪಕ್ಷದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಕುಟುಕಿ, ಕಾಂಗ್ರೆಸ್ ಪಕ್ಷದ ಎಲ್ಲ ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟಿನಿಂದ ಇದ್ದು ಹೈಕಮಾಂಡ್ ಸೂಚಿಸುವ ಅಭ್ಯರ್ಥಿಗೆ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಮರ್ಥರಿಗೆ ಟಿಕೆಟ್ ನೀಡಲಿ
ಮಾಜಿ ಮುಖ್ಯಮತ್ರಿ ಸಿದ್ದರಾಮಯ್ಯನವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿ ನೀನೆ ಎಂದು ಯಾರಿಗೂ ತಿಳಿಸಿಲ್ಲ. ಪಕ್ಷ ಸಂಘಟಿಸುವ0ತೆ ಮಾತ್ರ ಸೂಚಿಸಿದ್ದು, ಕೆಲವರು ಸಿದ್ದರಾಮಯ್ಯನವರ ಆಶೀರ್ವಾದ ನಮಗೆ ಎಂಬ0ತೇ ಬಿಂಬಿಸಿಕೊಳ್ಳುತ್ತಿದ್ದಾರೆ. ಯಾರು ಸಮರ್ಥರಿರುತ್ತಾರೋ ಅವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಕೊಡಲಿ. ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಮರ್ಥವಾಗಿ ಜನಸೇವೆ ಮಾಡುವವರಿಗೆ ಟಿಕೆಟ್ ನೀಡುವಂತೆ ಹಿಂದುಳಿದ ವರ್ಗಗಳ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಖಡಕ್ ಆಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಕ್ಕಪ್ಪ, ನಟರಾಜು, ನಾರಾಯಣಗೌಡ, ಅಲ್ಪಸಂಖ್ಯಾತ ಮುಖಂಡ ಮುಜೀಬ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀಧರ್, ಪ್ರಸನ್ನ, ಸುರೇಶ್‌ನಾಯ್ಕ, ಕೆಂಕೆರೆ ಮಂಜುನಾಥ್ ಹಾಜರಿದ್ದರು.