Friday, 20th September 2024

Yettinahole Project: ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಈಡೇರಲಿ: ವಿಜಯೇಂದ್ರ

Yettinahole Project

ಬೆಂಗಳೂರು: ಎತ್ತಿನಹೊಳೆ ಯೋಜನೆಗೆ (Yettinahole Project) ಚಾಲನೆ ನೀಡಿರುವುದು ಸಂತಸದ ಸಂಗತಿ. ಆದರೆ, ಅದರ ಮೂಲ ಉದ್ದೇಶ ಈಡೇರಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಯೋಜನೆ ಕ್ರೆಡಿಟ್ ತೆಗೆದುಕೊಳ್ಳುವುದು ದೊಡ್ಡ ವಿಚಾರವಲ್ಲ, ಬಯಲು ಸೀಮೆ ಭಾಗದ ಜನರಿಗೆ ಅನುಕೂಲ ಆಗಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕತೆ ತೋರಿಸಿದರೆ ಸಾಕು ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಭಾಗಕ್ಕೆ ನೀರು ಕೊಡುವ ಯೋಜನೆ ಇದಾಗಿದೆ. ಇದರ ಆರಂಭದಲ್ಲಿ ಸುಮಾರು 8,500 ಕೋಟಿ ಯೋಜನಾ ವೆಚ್ಚ ಇದ್ದುದು, ಈಗ ಅದು ಸುಮಾರು 22,500 ಕೋಟಿಗೆ ಏರಿದೆ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ದೊಡ್ಡ ವಿಚಾರವಲ್ಲ, ಒಟ್ಟಿನಲ್ಲಿ ಬರಪೀಡಿತ ಜಿಲ್ಲೆಗಳ ಜನರಿಗೆ ಅನುಕೂಲ ಆಗಬೇಕು ಎಂದು ತಿಳಿಸಿದ್ದಾರೆ.

ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬಂದಿದೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸೇರಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಳೆದ ಕೆಲವು ದಿನಗಳಿಂದ ಹೋರಾಟ ಮಾಡುತ್ತ ಬಂದಿದೆ. ಮುಖ್ಯಮಂತ್ರಿಗಳ ಪರಿಸ್ಥಿತಿ, ಸಚಿವರ ಪರಿಸ್ಥಿತಿ ಸಹಜವಾಗಿಯೇ ನಮಗೆ ಅರ್ಥವಾಗುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಿದ್ದು, ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿಯೇ ಪಿತೂರಿ ನಡೆದಿದೆ. ಸಂದರ್ಭ ಬಂದಾಗ ಅದಕ್ಕೆ ಸೂಕ್ತ ಉತ್ತರ ಕೊಡಲಿದ್ದೇವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಬಗ್ಗೆ ಸಿಎಂ, ಡಿಸಿಎಂ ಕ್ರೆಡಿಟ್ ವಾರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಹೋಗುವ ಮುಂಚಿತವಾಗಿಯೇ ನೆನ್ನೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೂಜೆ ಪುನಸ್ಕಾರ ಮಾಡಿದ್ದನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಅಲುಗಾಡುವ ಸಂದರ್ಭ ಇದಾಗಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಡಿ.ಕೆ. ಶಿವಕುಮಾರ್ ಕೂಡ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವವರು ಎಂದು ವಿಶ್ಲೇಷಿಸಿದರು.

ದೊಡ್ಡ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ

ಇದೇ 2ರಂದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿ ಅವರು ದೆಹಲಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲೂ ಸದಸ್ಯತ್ವ ಅಭಿಯಾನವು ದೊಡ್ಡ ಮಟ್ಟದಲ್ಲಿ ನಡೆದಿದೆ ಎಂದು ವಿವರಿಸಿದರು.

ಗೌರಿ ಗಣೇಶ ಹಬ್ಬದ ಈ ಸಂದರ್ಭದಲ್ಲಿ ನಮ್ಮೆಲ್ಲರ ಹಿರಿಯರಾದ ರಾಮಚಂದ್ರೇಗೌಡರ ಸದಸ್ಯತ್ವ ನೋಂದಣಿ ಮಾಡಿದ್ದೇವೆ. ರಾಮಚಂದ್ರೇಗೌಡರು ಬಿ.ಎಸ್.ಯಡಿಯೂರಪ್ಪ ಅವರ ಜತೆಜತೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿದವರು. ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ರಾಮಚಂದ್ರೇಗೌಡರು ಕೂಡ ಒಬ್ಬರು. ಅವರ ಆಶೀರ್ವಾದ ಪಡೆದು ಸದಸ್ಯತ್ವ ನೋಂದಣಿ ಮಾಡಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | N Nagaraj: ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡುವುದೇ ಶಿಕ್ಷಕರ ಆಶಯವಾಗಿರಬೇಕು- ಎನ್.ನಾಗರಾಜ್

ವೃತ್ತಗಳಲ್ಲಿ ಕುಳಿತು ಬಿಜೆಪಿ ಸದಸ್ಯತ್ವ ನೋಂದಣಿ ನಡೆಸಿದ್ದನ್ನು ನೆನಪಿಸಿಕೊಂಡ ರಾಮಚಂದ್ರೇಗೌಡರು, ಈಗ ಆಧುನಿಕ ರೀತಿಯಲ್ಲಿ ಮೊಬೈಲ್ ಮೂಲಕ ಸದಸ್ಯತ್ವ ನೋಂದಾಯಿಸುವ ಕಾರ್ಯ ನಡೆದಿದೆ. ಇದೊಂದು ಒಳ್ಳೆಯ ಸೂಚನೆ ಎಂದು ತಿಳಿಸಿದರು. ಮೋದೀಜಿ ಅವರು ಮತ್ತೊಮ್ಮೆ ಅಂದರೆ ನಾಲ್ಕನೇ ಬಾರಿಗೆ ಪ್ರಧಾನಿ ಆಗಲಿ ಎಂದು ಹಾರೈಸಿದರು.