Friday, 13th December 2024

ಮೈಸೂರಿನಲ್ಲಿ ಯೋಗಾಭ್ಯಾಸ: 12 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಮೈಸೂರು: ತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಬೆಳಗ್ಗೆ ಅರಮನೆ ಆವರಣದ ಮುಂಭಾಗ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿ ಸಂಭ್ರಮಿಸಿದರು.

ನಗರದ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಯೋಗಗುರು ಡಾ.ಪಿ.ಎನ್.ಗಣೇಶ್ ಕುಮಾರ್ ಅವರು 45 ನಿಮಿಷಗಳ ಯೋಗ ಹೇಳಿಕೊಟ್ಟರು.

ನಂತರ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ, ಭಾರತ ದೇಶವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿ ಯೋಗವನ್ನು ಅಂತರಾಷ್ಟ್ರೀಯ ದಿನವ ನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿ ಇಂದಿಗೆ ಹತ್ತು ವರ್ಷವಾಗಿದೆ. ಶಿಸ್ತು ಬದ್ಧ ಜೀವನ ನಡೆಸಲು ಯೋಗ ಅತ್ಯಂತ ಪ್ರೇರಣೆಯಾಗಿದೆ. ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಯೋಗ ಮಾಡುವುದರಿಂದ ನಮ್ಮ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯ ಚಟುವಟಿಕೆ, ಮನಸ್ಸಿನ ಸಮತೋಲನ ಆರೋಗ್ಯದ ವೃದ್ಧಿ, ಶಿಸ್ತು ಬದ್ಧವಾದ ಜೀವನ ನಡೆಸಲು ಅತ್ಯಂತ ಪ್ರೇರಣೆಯಾಗಿರುವುದು ಆರೋಗ್ಯ ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಅಂದಿನ ಕಾಲದ ಶ್ರೀತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲೆ ಮಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯೋಗ ಅಭ್ಯಾಸ ಮೈಸೂರಿನಲ್ಲಿ ಶುರುವಾಗಿತ್ತು ಎಂದರು.