ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಸೋಮವಾರ ಯುವಕಾಂಗ್ರೆಸ್ ಕಾರ್ಯ ಕರ್ತರು ಹಮ್ಮಿಕೊಂಡಿದ್ದ ಜನಾಕ್ರೋಶ ಪ್ರತಿಭಟನಾ ರ‍್ಯಾಲಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ವಿಪ ಸದಸ್ಯ ಆರ್.ರಾಜೇಂದ್ರ ಸೇರಿದಂತೆ ನೂರಾರು ಕಾರ್ಯ ಕರ್ತರು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಾರ್ವಜನಿಕ ಸಮಾರಂಭ ನಡೆಸಿ,ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ದ ಘೋಷಣೆ ಕೂಗುತ್ತಾ ಬಿ.ಹೆಚ್.ರಸ್ತೆ,ಎಂ.ಜಿ.ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು,ಪೊಲೀಸರು ಹಾಕಿದ್ದ ಬ್ಯಾರಿಕೇಡ್ ತಳ್ಳಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭ ದಲ್ಲಿ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಪೊಲೀಸರ ತಂಡ, ಅವರನ್ನು ತಡೆದು ಪೊಲೀಸ್ ವಾಹನಕ್ಕೆ ತುಂಬಲು ಮುಂದಾದಾಗ ಕೆಲ ಕಾಲ ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು. ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹರಸಾಹಸ ಪಟ್ಟು ಪೊಲೀಸರು ವಾಹನಕ್ಕೆ ತುಂಬುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಟೌನ್‌ಹಾಲ್ ವತ್ತದಲ್ಲಿ ನಡೆದ ಜನಾಕ್ರೋಶ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ,ರಾಜ್ಯದಲ್ಲಿರುವ ಬಿಜೆಪಿ ಸರಕಾರ ಸಂವಿಧಾನದ ಚೌಕಟ್ಟು ಮೀರಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ.
ಶೇ.10 ರ ಕಮಿಷನ್ ಸರಕಾರ ಎಂದು ಸಿದ್ದರಾಮಯ್ಯ ಸರಕಾರವನ್ನು ಟೀಕಿಸಿದ್ದ ಮೋದಿ, ಶೇ40ರ ಕಮಿಷನ್ ನೀಡಬೇಕೆಂದು ಸ್ವತಹಃ ಸಂತ್ರಸ್ಥರೇ ಪತ್ರ ಬರೆದರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಂತಹ ಸರಕಾರಕ್ಕೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ ಬೇಕಿದೆ. ಯುವ ಕಾಂಗ್ರೆಸ್‌ನ ಜನಾಕ್ರೋಶ ಹೋರಾಟ ಪ್ರತಿಹಳ್ಳಿ, ಹೋಬಳಿಗಳನ್ನು ಮುಟ್ಟ ಬೇಕಿದೆ ಎಂದರು.
ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ,ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಸಾಧನೆ ಎಂದರೆ ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಯೋಜನೆಗಳ ಹೆಸರು ಬದಲಾವಣೆಯಷ್ಟೇ. ಇಂದು ದೇಶದಲ್ಲಿ 60 ಲಕ್ಷ ಸರಕಾರಿ ನೌಕರಿ ಖಾಲಿ ಇದೆ.ಈ ಬಗ್ಗೆ ಪ್ರಶ್ನಿಸಿದರೆ ಇಡಿ, ಐಟಿ ಹೆಸರಿನಲ್ಲಿ ಬೆದರಿಸುವ ಕುತಂತ್ರದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರದ್ದು ಗಾಂಧಿ ಹಿಂದುತ್ವ, ಬಿಜೆಪಿಯದ್ದು ಗೂಡ್ಸೆ ಹಿಂದುತ್ವ.ನಿಮಗೆ ನಾಚಿಕೇಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಜನಾಕ್ರೋಶ ಪ್ರತಿಭಟನೆಯನ್ನು ಕುರಿತು ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ,ಈ ದೇಶದ ಪ್ರಧಾನಿಯಾಗಿ ಓರ್ವ ಟೀ ಮಾರಾಟ ಮಾಡುವ ವ್ಯಕ್ತಿ ಆಯ್ಕೆಯಾಗಿದ್ದರೆ, ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ. ಇಂತಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿ ಪಕ್ಷಕ್ಕೆ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇದೆಯೇ,ಒಮ್ಮೆಯೂ ರಾಜ್ಯದ ಜನತೆಗೆ ಬಹುಮತ ನೀಡದಿದ್ದರೂ, ಪ್ರತಿಪಕ್ಷಗಳ ಶಾಸಕರನ್ನು ಅಪರೇಷನ್ ಕಮಲದ ಮೂಲಕ ಸೆಳೆದು,ಹಿಂಬಾಗಿಲಿನ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಜನಸಾಮಾನ್ಯರ ಹಿತಬೇಕಿಲ್ಲ, ಕಪ್ಪು ಹಣ ವಾಪಸ್, ಉದ್ಯೋಗ ನೀಡುವ ಭರವಸೆ ನೀಡಿದ್ದ ಬಿಜೆಪಿ,ಬದಲಾಗಿದೆ.
ಸಾರ್ವಜನಿಕ ಉದ್ದಿಮೆಗಳ ಮಾರಾಟ,ಜಿ.ಎಸ್.ಟಿ. ಹೆಸರಿನಲ್ಲಿ ಜನರಿಗೆ ತೆರಿಗೆ ಹೇರಿ ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ. ರಾಜ್ಯಕ್ಕೆ ಜಿ.ಎಸ್.ಟಿ ಪಾಲು ನೀಡಲು ಅಡ್ಡಗಾಲು ಹಾಕಿದ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಅವರನ್ನು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ,ಇಡೀ ರಾಜ್ಯದ ಮಾನ ಹರಾಜಿಗಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದರು.
ವೇದಿಕೆಯಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್,ವಕ್ಪ್ ಬೋರ್ಡ್ ಮಾಜಿ ಚರ‍್ಮನ್ ಇಕ್ಬಾಲ್ ಅಹಮದ್,ರೇವಣ್ಣಸಿದ್ದಯ್ಯ, ಕಲ್ಲಹಳ್ಳಿ ದೇವರಾಜು,ಯುವಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾರೆಡ್ಡಿ, ಸುನೀಲ್, ಪ್ರದೀಪ್, ಆಶಿಕಾ,ದಿವ್ಯಾ, ಖಾಲಿದ್, ಅನಿಲ್, ಹಿಲಾಯಿ ಸಿಖಂದರ್, ರಾಜೇಶ್ ದೊಡ್ಡಮನೆ, ಶ್ರೀನಿವಾಸ್, ಜಿ.ಎನ್.ಮೂರ್ತಿ, ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.