ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಜಗತ್ತಿನ ದಿಗ್ಗಜ ಸಂಸ್ಥೆಗಳ ಅತ್ಯುನ್ನತ ಹುದ್ದೆಗಳಲ್ಲಿರುವ ಭಾರತೀಯರ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.
ಕಂಪ್ಯೂಟಿಂಗ್ ಜಗತ್ತಿನ ದೈತ್ಯ ಸಂಸ್ಥೆಗಳಲ್ಲಿ ಒಂದಾದ IBM ಮುಖ್ಯಸ್ಥರಾಗಿ ಅರವಿಂದ್ ಕೃಷ್ಣ ನೇಮಕಗೊಂಡಿದ್ದಾರೆ. ಐಐಟಿ-ಕಾನ್ಪುರದ ಪ್ರಾಡಕ್ಟ್ ಆಗಿರುವ ಕೃಷ್ಣ, ಏಪ್ರಿಲ್ 6ರಿಂದ ಕಂಪನಿಯ ಮುಖ್ಯಸ್ಥರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಸಿಇಓ ವರ್ಜಿನಿಯಾ ರೊಮೆಟ್ಟಿ ವಿದಾಯದಿಂದ ತೆರವಾದ ಸ್ಥಾನವನ್ನು ಕೃಷ್ಣ ಭರಿಸಲಿದ್ದಾರೆ.
ನಿವೃತ್ತ ಸೇನಾಧಿಕಾರಿಯ ಪುತ್ರರಾದ ಕೃಷ್ಣ, 57, ಆಂಧ್ರ ಪದೇಶದ ಪಶ್ಚಿಮ ಗೋದಾವರಿ ಜಿಲ್ಲೆಯವರಾಗಿದ್ದಾರೆ. ಕಾನ್ಪುರ ಐಐಟಿಯಲ್ಲಿ ಬಿ.ಟೆಕ್ ಮುಗಿಸಿರುವ ಅವರು ಇಲೆನೋಯಿ
ವಿವಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಕೃಷ್ಣ ಅವರು 1990ರಿಂದಲೂ IBMನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಅವರ ಹೆಸರಿನಲ್ಲಿ 15 ಪೇಟೆಂಟ್‌ಗಳಿವೆ.
Breaking news:
Arvind Krishna elected as IBM Chief Executive Officer
Jim Whitehurst elected IBM President
Ginni Rometty continues as Executive Chairman of the BoardLearn more: https://t.co/h3YxxNZIPq pic.twitter.com/AbcLzM4dbK
— IBM (@IBM) January 30, 2020
108 ವರ್ಷಗಳ ಇತಿಹಾಸವಿರುವ ಈ ಪ್ರತಿಷ್ಠಿತ ಕಂಪನಿಯ ಬ್ರಾಂಡ್ ವ್ಯಾಲ್ಯೂ $80 ಶತಕೋಟಿಯಷ್ಟಿದೆ. 2013ರಿಂದ ಶೇರುಗಳ ಮೌಲ್ಯದಲ್ಲಿ ಇಳಿಮುಖ ಟ್ರೆಂಡ್‌ನತ್ತ ಸಾಗುತ್ತಿದ್ದ IBMನ ಶೇರು ಮೌಲ್ಯದಲ್ಲಿ ಈ ಘೋಷಣೆಯ ಬಳಿಕ 5%ನಷ್ಟು ಏರಿಕೆ ಕಂಡುಬಂದಿದೆ.
ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲ, ಆಲ್ಫಬೆಟ್/ಗೂಗಲ್‌ನ ಸುಂದರ್ ಪಿಚ್ಚಾಯ್, ಅಡೋಬ್‌ನ ಶಂತನು ನಾರಾಯಣ್, ಮೈಕ್ರಾನ್ ಟೆಕ್ನಾಲಜಿಯ ಸಂಜಯ್ ಮೆಹ್ರೋತ್ರಾ, ಪಾಲಾ ಆಲ್ಟೋದ ನಿಕೇಶ್ ಅರೋರಾ ಹಾಗೂ NetAppನ ಜಾರ್ಜ್ ಕುರಿಯನ್ ಈ ಪಟ್ಟಿಯಲ್ಲಿರುವ ಘಟಾನುಘಟಿಗಳಾಗಿದ್ದಾರೆ. ಇವರೆಲ್ಲಾ ಮುನ್ನಡೆಸುತ್ತಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು $2.7 ಲಕ್ಷ ಕೋಟಿಗಳಷ್ಟಿದೆ.
$107 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವಿದ್ದ IBM, ಕಳೆದ ಎಂಟು ವರ್ಷಗಳಲ್ಲಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊಂಚ ಚೇತರಿಕೆ ಕಂಡಿರುವ ಸಂಸ್ಥೆಗೆ, ಅರವಿಂದ್ ಹೊಸ ಚೇತರಿಕೆ ನೀಡುವರು ಎನ್ನುವ ಭರವಸೆ ಇಡಲಾಗಿದೆ.