ಲಾಹೋರ್: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಇದೇ ತಿಂಗಳ 18ರೊಳಗೆ ಬಂಧಿಸುವಂತೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶನಿವಾರ ಪೊಲೀಸರಿಗೆ ಆದೇಶಿಸಿದೆ. ಇದು ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣವಾಗಿದೆ.
ಗುಜ್ರಾನ್‌ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ತಕ್ಷಣವೇ ಮಸೂದ್ ಅಜರ್‌ನನ್ನು ಬಂಧಿಸಿ ನ್ಯಾಯಾ ಲಯದ ಮುಂದೆ ಹಾಜರು ಪಡಿಸುವಂತೆ ಕಳೆದ ಗುರುವಾರ ಬಂಧನ ವಾರಂಟ್ ಜಾರಿ ಮಾಡಿತ್ತು.
ಒಂದು ವೇಳೆ ಅಜರ್ ನನ್ನು ಬಂಧಿಸಲು ವಿಫಲವಾದರೆ ನ್ಯಾಯಾಲಯವು ಆತನನ್ನು ಘೋಷಿತ ಅಪರಾಧಿ ಎಂದು ಘೋಷಿಸು ತ್ತದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೆಇಎಂ ಮುಖ್ಯಸ್ಥರು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಮತ್ತು ಜಿಹಾದಿ ಪುಸ್ತಕಗಳ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಟಿಡಿ ನ್ಯಾಯಾಧೀಶರಿಗೆ ಮಾಹಿತಿ ನೀಡಿದೆ.
ಅಜರ್ ತನ್ನ ಹುಟ್ಟೂರು ಬಹವಾಲ್ಪುರದ ಗೋಪ್ಯ ಸ್ಥಳದಲ್ಲಿ ಅಡಗಿಕೊಂಡಿದ್ದಾನೆ ಎನ್ನಲಾಗಿದೆ. ಐದು ಭಯೋತ್ಪಾದನಾ ಕೃತ್ಯಗಳಲ್ಲಿ ಭಾರತಕ್ಕೆ ಬೇಕಾಗಿರುವ ‘ಮೋಸ್ಟ್ ವಾಟೆಂಡ್’ ಉಗ್ರ. 2019 ಮೇ 1ರಂದು ವಿಶ್ವಸಂಸ್ಥೆಯು ಆತನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ.