ನವದೆಹಲಿ: ಕೆನಡಾದಲ್ಲಿ ಅರೆಸ್ಟ್ ಆಗಿರುವ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್(Khalistan Tiger Force)ನ ಮುಖ್ಯಸ್ಥ ಅರ್ಶ್ ದಲ್ಲಾ(Arsh Dalla) ಅಲಿಯಾಸ್ ಅರ್ಶ್‌ದೀಪ್ ಗಿಲ್ ಅನ್ನು ಹಸ್ತಾಂತರಿಸುವಂತೆ ಕೆನಡಾಕ್ಕೆ ನವೆಂಬರ್ 10 ರಂದು ಭಾರತ ಮನವಿ ಮಾಡಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಕೊಲೆ, ಕೊಲೆ ಯತ್ನ, ಸುಲಿಗೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ 50 ಕ್ಕೂ ಹೆಚ್ಚು ಪ್ರಕರಣಗಳು ದಲ್ಲಾ ವಿರುದ್ಧ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಆತನನ್ನು ಒಪ್ಪಿಸುವಂತೆ ಭಾರತ ಕೆನಡಾ ಸರ್ಕಾರಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ.
ಇನ್ನು ದಲ್ಲಾ ಬಂಧನದ ಕುರಿತು ಕೆನಡಾದ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿಲ್ಲ. ಹತರಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಆಪ್ತ ಸಹಾಯಕ ಎಂದು ಕರೆಯಲ್ಪಡುವ ದಲ್ಲಾ, ಕಳೆದ ವರ್ಷ ನಿಜ್ಜರ ಹತ್ಯೆಯ ನಂತರ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಅನ್ನು ಮುನ್ನಡೆಸುತ್ತಿದ್ದ.
ಇನ್ನು ಭಾರತ ನೀಡಿದ ಉಗ್ರರ ಪಟ್ಟಿಯಲ್ಲಿ ಅರ್ಶದೀಪ್ ದಲ್ಲಾ ಮೋಸ್ಟ್ ವಾಂಟೆಡ್. ಈತನನ್ನು ವಶಕ್ಕೆ ಪಡೆಯುವ ಮೂಲಕ ಭಾರತದ ಹಲವು ಮೋಸ್ಟ್ ವಾಂಟೆಡ್ ಉಗ್ರರಿಗೆ ಕೆನಡಾ ಆಶ್ರಯ ನೀಡುತ್ತಿದೆ ಅನ್ನೋದು ಸಾಬೀತಾಗಿದೆ. ಹರ್ದೀಪ್ ನಿಜ್ಜರ್ ಅವರ ಆಪ್ತ ಸಹಾಯಕ ಅರ್ಶ್ ದಲ್ಲಾ ತನ್ನ ಸ್ಲೀಪರ್ ಸೆಲ್ ನೆಟ್‌ವರ್ಕ್ ಮೂಲಕ ಪಂಜಾಬ್‌ನಲ್ಲಿ ಅನೇಕ ಉದ್ದೇಶಿತ ಹತ್ಯೆಗಳನ್ನು ನಡೆಸಿದ್ದಾನೆ ಎಂಬ ಆರೋಪವಿದೆ. ಎನ್ಐಎ ಪ್ರಕಾರ, ಇವರಿಬ್ಬರು ಪ್ರಮುಖ ವ್ಯಕ್ತಿಗಳ ಹತ್ಯೆಯಲ್ಲಿ ಭಾಗಿಯಾಗಿದ್ದರು. 2022 ರಲ್ಲಿ, ಡೇರಾ ಸಚ್ಚಾ ಸೌಧದ ಸದಸ್ಯ ಮನೋಹರ್ ಲಾಲ್ ಹತ್ಯೆಯೊಂದಿಗೆ ದಲ್ಲಾ ಮತ್ತು ನಿಜ್ಜರ್ ಸಂಬಂಧ ಹೊಂದಿದ್ದರು. 2024 ರಲ್ಲಿ, ಪಂಜಾಬ್‌ನಲ್ಲಿ ಕಾಂಗ್ರೆಸ್ ನಾಯಕನ ಹತ್ಯೆಯ ಹೊಣೆಯನ್ನು ದಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿಕೊಂಡಿದ್ದ.
ಅರ್ಶ್ ದಲ್ಲಾ ಯಾರು?
ದಲ್ಲಾ ಪಂಜಾಬ್‌ನ ಮೊಗಾದಿಂದ ಬಂದವರು. ನಿಜ್ಜರ್‌ನ ಪರಿಚಿತ ಸಹಾಯಕ, ಸ್ಲೀಪರ್ ಸೆಲ್ ಹಂತಕರ ಗ್ರಿಡ್ ಮೂಲಕ ಅನೇಕ ಉದ್ದೇಶಿತ ಹತ್ಯೆಗಳನ್ನು ಆಯೋಜಿಸಿದಾತನೇ ಈ ದಲ್ಲಾ. ದಲ್ಲಾನ ಸ್ಲೀಪರ್ ಸೆಲ್ ನೆಟ್‌ವರ್ಕ್ ಮೂರು ಖಂಡಗಳನ್ನು ವ್ಯಾಪಿಸಿದೆ. ಉತ್ತರ ಅಮೆರಿಕಾದಲ್ಲಿ ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್, ಯುರೋಪ್‌ನ ಕೆಲವು ಭಾಗಗಳು ಮತ್ತು ಏಷ್ಯಾದಲ್ಲಿ ದುಬೈ, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್‌ಗಳಲ್ಲಿ ಈತನ ಸೂಚನೆ ಮೇರೆಗೆ ಹಲವು ದುಷ್ಕೃತ್ಯಗಳು ನಡೆಯುತ್ತಿವೆ. ಆತನ ಅಪಾರ ಕ್ರಿಮಿನಲ್ ಕಾರ್ಯಾಚರಣೆಗೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಅಥವಾ ISI ಬೆಂಬಲ ಕೂಡ ಇದೆ ಎನ್ನಲಾಗಿದೆ. ಏಕೆಂದರೆ ಅವನು ಪಾಕಿಸ್ತಾನದ ಗಡಿಯುದ್ದಕ್ಕೂ ಬಂದೂಕುಗಳನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: Gurpatwant Singh Pannun: ಜಸ್ಟಿನ್ ಟ್ರುಡೋ ಜತೆ ಸಂಪರ್ಕ ಇರೋದಾಗಿ ಒಪ್ಪಿಕೊಂಡ ಖಲಿಸ್ತಾನಿ ಉಗ್ರ ಪನ್ನುನ್