Sunday, 24th November 2024

Assisted Dying: ಹಲವು ದೇಶಗಳಲ್ಲಿದೆ ದಯಾ ಮರಣಕ್ಕೆ ಅವಕಾಶ! ಷರತ್ತುಗಳೇನು?

Assisted Dying

ದೀರ್ಘಕಾಲದಿಂದ ಅಸ್ವಸ್ಥರಾಗಿದ್ದುಕೊಂಡು ಸಾಯುವ ಪರಿಸ್ಥಿತಿಯಲ್ಲಿದ್ದರೂ ಸಾವು ಬಾರದೆ ನರಳಾಡುತ್ತಿರುವ ಜೀವವನ್ನು ನೋಡುವುದು ಎಂತ ಕಲ್ಲು ಹೃದಯದವರಿಗಾದರೂ ತುಂಬಾ ನೋವು ಕೊಡುವಂಥದ್ದು. ಹೀಗಾಗಿ ಇವರಿಗೆ ದಯಾಮರಣ (Assisted Dying) ಪಾಲಿಸಲು ಕಾನೂನಿನ ನೆರವು ಪಡೆಯಲಾಗುತ್ತದೆ. ಇದಕ್ಕಾಗಿ ಅವರ ಹತ್ತಿರದ ಸಂಬಂಧಿಗಳು ಮಾತ್ರ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಇದಕ್ಕೆ ಸಾಕಷ್ಟು ಕಾನೂನು ಕ್ರಮಗಳಿವೆ.

ಇಂದಿಗೂ ವಿಶ್ವದ ಹಲವಾರು ದೇಶಗಳು ದಯಾ ಮರಣದ ಕಾನೂನು ಮಾನ್ಯ ಮಾಡಬೇಕೇ ಬೇಡವೇ ಎನ್ನುವ ಕುರಿತು ಚರ್ಚೆ ನಡೆಸುತ್ತಿವೆ. ವಿಶ್ವದ ಈ ಹತ್ತು ಹನ್ನೊಂದು ರಾಷ್ಟ್ರಗಳು ದಯಾ ಮರಣವನ್ನು ಹೇಗೆ ಪರಿಗಣಿಸುತ್ತಿವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸ್ವಿಟ್ಜರ್ಲೆಂಡ್

1942ರಲ್ಲಿ ದಯಾಮರಣ ಉದ್ದೇಶವು ಸ್ವಾರ್ಥವಲ್ಲ ಎಂಬ ಷರತ್ತಿನ ಮೇಲೆ ದಯಾ ಮರಣವನ್ನು ಸ್ವಿಟ್ಜರ್ಲೆಂಡ್ ಕಾನೂನುಬದ್ಧಗೊಳಿಸಿತು. ಇದು ದಯಾಮರಣಕ್ಕೆ ಅನುಮತಿ ನೀಡಿದ ವಿಶ್ವದ ಮೊದಲ ದೇಶವಾಗಿದೆ. ಇದಕ್ಕಾಗಿ ವೈದ್ಯರು ಔಷಧಗಳನ್ನು ಶಿಫಾರಸು ಮಾಡಬಹುದು.

ಅಮೆರಿಕ

ಯುನೈಟೆಡ್ ಸ್ಟೇಟ್ಸ್ ನ 10 ರಾಜ್ಯಗಳಲ್ಲಿ ವೈದ್ಯರ ಸಹಾಯದಿಂದ ಸಾಯುವುದು ಕಾನೂನುಬದ್ಧವಾಗಿದೆ. ಕ್ಯಾಲಿಫೋರ್ನಿಯಾ, ಕೊಲೊರಾಡೋ, ಹವಾಯಿ, ಮೊಂಟಾನಾ, ಮೈನೆ, ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ, ಒರೆಗಾನ್, ವರ್ಮೊಂಟ್ ಮತ್ತು ವಾಷಿಂಗ್ಟನ್ ಜೊತೆಗೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾಡಾ. 1997ರಲ್ಲಿ ಜಾರಿಗೆ ಬಂದ ಕಾನೂನಿನ ಅಡಿಯಲ್ಲಿ ಒರೆಗಾನ್ ಇದನ್ನು ಕಾನೂನುಬದ್ಧಗೊಳಿಸಿದ ಮೊದಲ ರಾಜ್ಯವಾಗಿದೆ.

ಮಾರಣಾಂತಿಕವಾಗಿ ಅನಾರೋಗ್ಯಕ್ಕೆ ಒಳಗಾದ ಆರು ತಿಂಗಳಿಗಿಂತ ಕಡಿಮೆ ಜೀವಿತಾವಧಿ ಹೊಂದಿರುವವರಿಗೆ ದಯಾ ಮರಣವನ್ನು ಕೇಳಬಹುದು. ಇದಕ್ಕಾಗಿ ವೈದ್ಯರು ಔಷಧಿಗಳನ್ನು ಶಿಫಾರಸ್ಸು ಮಾಡುತ್ತಾರೆ.

ನೆದರ್ಲ್ಯಾಂಡ್ಸ್

2002ರಲ್ಲಿ ನೆದರ್ಲ್ಯಾಂಡ್ಸ್ ನಲ್ಲಿ ದಯಾಮರಣದ ಕಾಯ್ದೆ ಜಾರಿಗೆ ಬಂದಿತು. ಇಲ್ಲಿ ರೋಗಿಗಳು ಚೇತರಿಕೆಯಾಗುವ ಯಾವುದೇ ನಿರೀಕ್ಷೆ ಇಲ್ಲದೆ ಸಂಕಟ ಅನುಭವಿಸುತ್ತಿದ್ದರೆ ಈ ಕಾಯ್ದೆಯ ನೆರವು ಪಡೆಯಬಹುದು. ಅಪ್ರಾಪ್ತ ವಯಸ್ಕರು 12ನೇ ವಯಸ್ಸಿನ ಬಳಿಕ ದಯಾಮರಣವನ್ನು ಕೋರಬಹುದು. ಆದರೆ ಪೋಷಕರ ಅನುಮತಿ ಅಗತ್ಯವಿರುತ್ತದೆ.

Assisted Dying

ಬೆಲ್ಜಿಯಂ

ಬೆಲ್ಜಿಯಂನಲ್ಲಿ 2002ರಲ್ಲಿ ಮಾರಣಾಂತಿಕ ಅನಾರೋಗ್ಯಕ್ಕಾಗಿ ಈಡಾಗಿರುವವರು ವೈದ್ಯಕೀಯ ನೆರವಿನಿಂದ ದಯಾ ಮರಣ ಪಡೆಯಲು ಅನುಮತಿ ನೀಡಿತ್ತು. ಇದರಲ್ಲಿ 2014ರಿಂದ ಮಾರಣಾಂತಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ 18 ವರ್ಷದೊಳಗಿನವರನ್ನೂ ಸೇರಿಸಲಾಗಿದ್ದು, ಇದಕ್ಕೆ ಪೋಷಕರ ಅನುಮತಿ ಕಡ್ಡಾಯವಾಗಿದೆ.

ಕೆನಡಾ

ಕೆನಡಾವು 2016ರಲ್ಲಿ ದಯಾ ಮರಣವನ್ನು ಪರಿಚಯಿಸಿತ್ತು. ಐದು ವರ್ಷಗಳಿಂದ ಅನಾರೋಗ್ಯಕ್ಕೆ ಈಡಾಗಿರುವ, ಚೇತರಿಕೆ ಲಕ್ಷಣವಿಲ್ಲದವರು ಮಾತ್ರ ದಯಾ ಮರಣದ ಅನುಮತಿ ಪಡೆಯಲು ಕಾನೂನನ್ನು ವಿಸ್ತರಿಸಲಾಯಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಇದರಲ್ಲಿ ಸೇರಿಸಲು ವೈದ್ಯಕೀಯ ಸಹಾಯವನ್ನು ವಿಸ್ತರಿಸುವ ಯೋಜನೆಯನ್ನು ದೇಶವು 2027ರವರೆಗೆ ವಿಳಂಬಗೊಳಿಸಿದೆ.

ಆಸ್ಟ್ರೇಲಿಯಾ

2019ರಲ್ಲಿ ಮಾರಣಾಂತಿಕವಾಗಿ ಅನಾರೋಗ್ಯ ಅಥವಾ ಅಸಹನೀಯ ದುಃಖವನ್ನು ಉಂಟುಮಾಡುವ ಸ್ಥಿತಿಯನ್ನು ಹೊಂದಿರುವವರಿಗೆ ದಯಾಮರಣವು ಕಾನೂನುಬದ್ಧವಾಗಿದೆ.

ಸ್ಪೇನ್

2021ರಲ್ಲಿ ದಯಾ ಮರಣದ ಕಾನೂನನ್ನು ಸ್ಪೇನ್ ಅನುಮೋದಿಸಿದೆ. ಗುಣಪಡಿಸಲಾಗದ ಅಥವಾ ದುರ್ಬಲಗೊಳಿಸುವ ಕಾಯಿಲೆಗಳಿರುವ ಜನರಿಗೆ ವೈದ್ಯಕೀಯ ಸಹಾಯದಿಂದ ಇದನ್ನು ಪಡೆಯಲು ಅವಕಾಶವಿದೆ.

ಜರ್ಮನಿ

2015ರವರೆಗೂ ಜರ್ಮನಿಯಲ್ಲಿ ದಯಾಮರಣ ಕಾನೂನುಬದ್ಧವಾಗಿತ್ತು. ಬಳಿಕ ಇದನ್ನು ಕೆಲವು ಕಾರಣಗಳಿಂದಾಗಿ ಕಾನೂನುಬಾಹಿರಗೊಳಿಸಿತು. ಬಳಿಕ ಸರಿಸುಮಾರು ಐದು ವರ್ಷಗಳ ಅನಂತರ ದೇಶದ ಸರ್ವೋಚ್ಚ ನ್ಯಾಯಾಲಯವು ಮಾರಣಾಂತಿಕವಾಗಿ ಅನಾರೋಗ್ಯ ಪೀಡಿತ ವಯಸ್ಕರಿಗೆ ದಯಾಮರಣವನ್ನು ಕಲ್ಪಿಸಲು ಸಹಾಯ ಮಾಡಲು ತೀರ್ಪು ನೀಡಿತು. ಆದರೆ ಶಾಸಕರು ಇನ್ನೂ ಈ ಹೊಸ ನಿಯಮಗಳನ್ನು ಅಂತಿಮಗೊಳಿಸಿಲ್ಲ.

Assisted Dying

ಫ್ರಾನ್ಸ್

ಫ್ರಾನ್ಸ್‌ನಲ್ಲಿ ವೈದ್ಯರ ಸಹಾಯದಿಂದ 2016 ರಿಂದ ದಯಾಮರಣಕ್ಕೆ ಅನುಮತಿ ನೀಡಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ವರ್ಷದ ಆರಂಭದಲ್ಲಿ ಈ ಹೊಸ ಕಾನೂನನ್ನು ಬೆಂಬಲಿಸಿದರು. ಇದು ಗುಣಪಡಿಸಲಾಗದ ಕಾಯಿಲೆಯಿಂದ ಬಳಲುವವರಿಗೆ ಮಾತ್ರ ಸಹಾಯ ಮಾಡುತ್ತದೆ. ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆಯನ್ನು ಪರಿಚಯಿಸಲಾಯಿತು.

ಬ್ರಿಟನ್

ಯುಕೆಯಲ್ಲಿ ದಯಾಮರಣವು ಕಾನೂನು ಬದ್ದವಾಗಿಲ್ಲ. ಈ ಕುರಿತು ಇಲ್ಲಿ ಇನ್ನು ಚರ್ಚೆ ನಡೆಯಬೇಕಿದೆ. ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಅಸ್ವಸ್ಥ ವಯಸ್ಕರು ತಮ್ಮ ಜೀವನವನ್ನು ಅಂತ್ಯಗೊಳಿಸುವ ಹಕ್ಕನ್ನು ಬದಲಾಯಿಸುವ ಮಸೂದೆಯನ್ನು ಅಕ್ಟೋಬರ್‌ನಲ್ಲಿ ಸಂಸತ್ತಿನಲ್ಲಿ ಮೊದಲು ಪರಿಚಯಿಸಲಾಯಿತು. ಈ ಕುರಿತು ನವೆಂಬರ್ 29ರಂದು ಚರ್ಚೆ ನಡೆಯಲಿದೆ.

Viral Video: ಅಪ್ಪನ ಜತೆ ನಡ್ಕೊಂಡು ಹೋಗ್ತಿದ್ದ ಬಾಲಕನ ಕಿಡ್ನಾಪ್‌ಗೆ ಯತ್ನ; ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ-ವಿಡಿಯೊ ಇದೆ

ಐರ್ಲೆಂಡ್

ಐರಿಶ್ ಸಂಸದೀಯ ಸಮಿತಿಯು ಈ ವರ್ಷ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಬೇಕೆಂದು ಶಿಫಾರಸು ಮಾಡಿದೆ. ಅಕ್ಟೋಬರ್‌ನಲ್ಲಿ ಬಹುಪಾಲು ಶಾಸಕರು ಸಮಿತಿಯ ಸಂಶೋಧನೆಗಳನ್ನು “ಗಮನಿಸಿ” ಪರವಾಗಿ ಮತ ಹಾಕಿದರು. ನವೆಂಬರ್ 29ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹೊಸ ಕಾನೂನನ್ನು ಪ್ರಸ್ತಾಪಿಸುವುದನ್ನು ಪರಿಗಣಿಸಬೇಕೇ ಎಂಬುದನ್ನು ಮುಂದಿನ ಸರ್ಕಾರ ನಿರ್ಧರಿಸಲಿದೆ.