ಬೈರುತ್: ಇರಾನ್‌ನ ಸರ್ವೊಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತೆರೆದಿದ್ದ ಹಿಬ್ರೂ ಭಾಷೆಯ ಖಾತೆಯನ್ನು ಅಮಾನತುಗೊಳಿಸಲಾಗಿದೆ.ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಯತೊಲ್ಲಾ ಅಲಿ ಖಮೇನಿ ಅವರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಜೆರುಸಲೇಂ ಮಾಧ್ಯಮವೊಂದು ವರದಿ ಮಾಡಿದೆ.
ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ (Israel) ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಪೋಸ್ಟ್‌ನಲ್ಲಿ ಇಸ್ರೇಲ್ ತಪ್ಪು ಮಾಡಿದೆ. ಇರಾನ್ ಮೇಲಿನ ಅದರ ಲೆಕ್ಕಾಚಾರ ತಪ್ಪಾಗಿದೆ. ಇರಾನ್ ರಾಷ್ಟ್ರವು ಯಾವ ರೀತಿಯ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಇಸ್ರೇಲ್‌ಗೆ ಅರ್ಥ ಮಾಡಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದರು.
ಇನ್ನು ಅಲಿ ಖಮೇನಿ ಅವರ ಹಿಬ್ರೂ ಭಾಷಾ ಖಾತೆಯನ್ನು ಕೇವಲ ಎರಡು ಪೋಸ್ಟ್‌ಗಳ ನಂತರ ಅಮಾನತುಗೊಳಿಸಲಾಗಿದೆ. ಶನಿವಾರ ಇರಾನ್‌ನಲ್ಲಿ ಸೇನಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ನಂತರ ಖಮೇನಿ ಇಸ್ರೇಲ್‌ನಲ್ಲಿ ಮಾತನಾಡುವ ಹೀಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಲು ಖಾತೆಯನ್ನು ತೆರೆದಾಗ, ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೋರಿಸಿರುವುದಾಗಿ ವರದಿಯಾಗಿದೆ.
ಮೊದಲ ಹೀಬ್ರೂ ಭಾಷೆಯ ಪೋಸ್ಟ್ ಶನಿವಾರ ಪ್ರಕಟಗೊಂಡಿತ್ತು. ಇದು “ಅಲ್ಲಾಹನ ಹೆಸರಿನಲ್ಲಿ” ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಆಗಿದ್ದು, ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ಇರಾನ್ ಸಮರ್ಥವಾಗಿದೆ. ಇಸ್ರೇಲ್ ಇರಾನ್‌ಗೆ ಸಂಬಂಧಿಸಿದಂತೆ ತಪ್ಪು ಲೆಕ್ಕಾಚಾರ ಹಾಕಿದೆ. ಇರಾನಿನ ಜನರ ಶಕ್ತಿ, ಸಾಮರ್ಥ್ಯ, ಜಾಣ್ಮೆ ಮತ್ತು ನಿರ್ಣಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ಇಸ್ರೇಲ್ ವಿರುದ್ಧ ಕಿಡಿ ಕಾಡಿದ್ದರು.
ಅಕ್ಟೋಬರ್ 1ರಂದು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಸೇನೆ ಶನಿವಾರ ಇರಾನ್ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿತ್ತು. ಈ ಭೀಕರ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದರು. ಇನ್ನು ಈ ಬಗ್ಗೆ ಇಸ್ರೇಲ್ ಸೇನೆ ವಕ್ತಾರ ಡೇನಿಯಲ್ ಹಗರಿ ಪ್ರತಿಕ್ರಿಯಿಸಿದ್ದು, ಇಸ್ರೇಲ್ ವಿರುದ್ಧ ಇರಾನ್ ನಡೆಸುತ್ತಿರುವ ನಿರಂತರ ದಾಳಿಗಳಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
ಇರಾನ್‌ನಲ್ಲಿನ ಆಡಳಿತ ಮತ್ತು ಪ್ರದೇಶದಲ್ಲಿನ ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇಸ್ರೇಲ್‌ನ ಮೇಲೆ ಪಟ್ಟುಬಿಡದೆ ಇರಾನ್ ದಾಳಿ ಮಾಡುತ್ತಿವೆ. ಪ್ರಪಂಚದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ಇಸ್ರೇಲ್ ಪ್ರತಿಕ್ರಿಯಿಸುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ. ನಾವು ಇಸ್ರೇಲ್ ಮತ್ತು ಅದರ ಜನರನ್ನು ರಕ್ಷಿಸಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Israel Airstrike: ಇರಾನ್ ಮೇಲೆ ಇಸ್ರೇಲ್ ಎರಡನೇ ಏರ್‌ಸ್ಟ್ರೈಕ್; ಇಲ್ಲಿದೆ ಭೀಕರ ದಾಳಿಯ ವಿಡಿಯೋ