ನವದೆಹಲಿ: ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಾಂಗ್ಲಾದೇಶದಲ್ಲಿ ಕೋಮು ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಮೂಲಭೂತವಾದಿಗಳು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಿಗೆ ಮತ್ತು ವಿಶೇಷವಾಗಿ ಹಿಂದೂಗಳಿಗೆ ಸಾಕಷ್ಟು ಕಾಟ ನೀಡುತ್ತಿದ್ದಾರೆ. ಇದಕ್ಕೊಂದು ಹೊಸ ಉದಾಹರಣೆ ಬೆಳಕಿಗೆ ಬಂದಿದೆ. ಚಿತ್ತಗಾಂಗ್ ಮೂಲದ ಇಸ್ಲಾಮಿಕ್ ಸಂಘಟನೆ ಹೆಫಾಜತ್-ಎ-ಇಸ್ಲಾಂ, ಇಸ್ಕಾನ್ (ISKCON) ಅನ್ನು ನಿಷೇಧಿಸುವಂತೆ ಒತ್ತಾಯಿಸಿದೆ.
ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಚಟ್ಟೋಗ್ರಾಮ್‌ನಲ್ಲಿ ಇತ್ತೀಚೆಗೆ ನಡೆದ ಜಾಥದಲ್ಲಿ, ‘ಇಸ್ಕಾನ್ ಅನ್ನು ನಿಷೇಧಿಸಿ, ಇಲ್ಲವೇ ಭಕ್ತರನ್ನು ಕೊಲ್ಲುತ್ತೇವೆ’ ಎಂಬ ಹಿಂಸಾತ್ಮಕ ಘೋಷಣೆಗಳನ್ನು ಕೂಗಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಧಾರಾಮನ್ ದಾಸ್ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. “ಬಾಂಗ್ಲಾದೇಶಿ ಮುಸ್ಲಿಮರು ಇಸ್ಕಾನ್ ಅನ್ನು ನಿಷೇಧಿಸುವಂತೆ ಮೊಹಮ್ಮದ್ ಯೂನಸ್‌ಗೆ ಸೂಚನೆ ನೀಡಿದ್ದಾರೆ. ಇಲ್ಲವಾದಲ್ಲಿ ಇಸ್ಕಾನ್ ಭಕ್ತರನ್ನು ಹಿಡಿದು ಬರ್ಬರವಾಗಿ ಕೊಲ್ಲುತ್ತೇವೆಂದು ಎಚ್ಚರಿಕೆ ನೀಡಿದ್ದಾರೆಂದು,” ಎಂದು ತಾವು ಹಂಚಿಕೊಂಡಿರುವ ವಿಡಿಯೊಗೆ ಈ ರೀತಿ ಬರೆದುಕೊಂಡಿದ್ದಾರೆ.
ಬಾಂಗ್ಲಾ ಬರಹಗಾರ್ತಿ ತಸ್ಲೀಮಾ ನಸ್ರೀನಾ ಆಕ್ರೋಶ
ಬಾಂಗ್ಲಾದೇಶ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಇಸ್ಕಾನ್ ಅನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿರುವ ಇಸ್ಲಾಮಿಕ್ ಸಂಘಟನೆಗಳ ವಿರುದ್ದ ಕಿಡಿ ಕಾರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಅವರು, ಬಾಂಗ್ಲಾದೇಶದಲ್ಲಿ ಇಸ್ಕಾನ್ ಸದಸ್ಯರು ಎದುರಿಸುತ್ತಿರುವ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ.
‘ಹಿಫಾಜತ್-ಎ-ಇಸ್ಲಾಂ ಭಯೋತ್ಪಾದನೆ ಕರೆ ನೀಡಿದೆ. ಅವರು ಇಸ್ಕಾನ್ ಸದಸ್ಯರನ್ನು ಕೊಲ್ಲಲು ಬಯಸುತ್ತಾರೆ. ಇಸ್ಕಾನ್ ಒಂದು ಭಯೋತ್ಪಾದಕ ಸಂಘಟನೆಯೇ ಮತ್ತು ಅದನ್ನು ನಿಷೇಧಿಸಬೇಕೇ? ಇಸ್ಕಾನ್ ಪ್ರಪಂಚದಾದ್ಯಂತ ಇದೆ,” ಎಂದು ಒತ್ತಿ ಹೇಳಿದ ತಸ್ಲೀಮಾ ನಸ್ರೀನ್, ಅವರು (ಇಸ್ಕಾನ್ ಭಕ್ತರು) ಎಂದಿಗೂ ಹಿಂಸಾಚಾರವನ್ನು ಪ್ರಚೋದಿಸಿಲ್ಲ. ‘ಇಸ್ಕಾನ್ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿದೆ ಮತ್ತು ಎಲ್ಲಿಯೂ ಇಂತಹ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಇದು ಬಾಂಗ್ಲಾದೇಶದಲ್ಲಿ ನಡೆಯುತ್ತದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಾದ ಶುರುವಾಗಿದ್ದು ಹೇಗೆ?
ಬಾಂಗ್ಲಾದೇಶದ ಇಸ್ಕಾನ್‌ಗೆ ಸಂಬಂಧಿಸಿದ ವಿವಾದವು ನವೆಂಬರ್ 5 ರಂದು ಸ್ಥಳೀಯ ಉದ್ಯಮಿಯೊಬ್ಬರು ಫೇಸ್‌ಬುಕ್ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು. ಅವರು ಇಸ್ಕಾನ್ ಅನ್ನು ಭಯೋತ್ಪಾದಕ ಗುಂಪು ಎಂದು ಕರೆದಿದ್ದರು. ಫೇಸ್‌ಬುಕ್ ಪೋಸ್ಟ್ ಚಟ್ಟೋಗ್ರಾಮ್‌ನ ಹಜಾರಿ ಗಲಿ ಪ್ರದೇಶದಲ್ಲಿ ಹಿಂದೂ ಸಮುದಾಯದಲ್ಲಿ ಕೋಪವನ್ನು ಹುಟ್ಟುಹಾಕಿದೆ. ಪೋಸ್ಟ್ ಬರೆದ ಉದ್ಯಮಿಯ ಮನೆಯ ಹೊರಗೆ ಜನ ಸೇರಿದ್ದರು. ಈ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಂತರ 100 ಆರೋಪಿಗಳನ್ನು ಬಂಧಿಸಲಾಗಿತ್ತು.