Sunday, 15th December 2024

Bangladesh Unrest: ಉಗ್ರ ಸಂಘಟನೆ ಮುಖಂಡನ ಜತೆ ಯೂನಸ್‌ ಫೊಟೋ ವೈರಲ್‌-ಭಾರೀ ವಿವಾದ

Bangladesh unrest

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶ(Bangladesh Unrest)ದಲ್ಲಿ ತಲೆದೋರಿರುವ ಹಿಂಸಾಚಾರದ ನಡುವೆಯೇ ಅಲ್ಲಿನ ಸರ್ಕಾರದ ಹಂಗಾಮಿ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌(Muhammad Yunus) ಫೊಟೋವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.  ಅವರು ಢಾಕಾದಲ್ಲಿ ಉಗ್ರಗಾಮಿ ಸಂಘಟನೆ ಹೆಫಾಜತ್-ಎ-ಇಸ್ಲಾಂನ ನಾಯಕ ಮಮುನುಲ್ ಹಕ್ ಮತ್ತು ಅವರ ಗುಂಪಿನ ಸದಸ್ಯರನ್ನು ಭೇಟಿಯಾಗಿರುವ ಚಿತ್ರಗಳು ಭಾರೀ ವಿವಾದವನ್ನು ಹುಟ್ಟುಹಾಕಿವೆ.

ಮೂಲಗಳ ಪ್ರಕಾರ, ಶನಿವಾರ (ಆಗಸ್ಟ್ 31) ನಡೆದ ಮುಹಮ್ಮದ್ ಯೂನಸ್ ಮತ್ತು ಹೆಫಾಜತ್ ನಾಯಕರ ನಡುವೆ ಸಭೆ ನಡೆದಿದ್ದು, ಸಭೆಯಲ್ಲಿ ಚುನಾವಣಾ ಸುಧಾರಣೆಗಳು ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವ ಅಗತ್ಯತೆಯ ಬಗ್ಗೆ ಚರ್ಚೆ ನಡೆದಿತ್ತು. ಸಭೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮುಹಮ್ಮದ್ ಯೂನಸ್ ಮತ್ತು ಮಾಮುನುಲ್ ಹಕ್ ನಡುವಿನ ಸಭೆಯು ಹಲವಾರು ಕಳವಳ ಮತ್ತು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಮತ್ತು ಭಾರತ ವಿರೋಧಿ ನಿಲುವನ್ನು ಹೊಂದಿರುವ ಹೆಫಾಜತ್-ಎ-ಇಸ್ಲಾಂ ಹಲವಾರು ವಿಧ್ವಂಸಕ ಕೃತ್ಯಗಳ ಹಿಂದೆ ಕೈವಾಡ ಹೊಂದಿದೆ.

ಶೇಖ್ ಹಸೀನಾ ನೇತೃತ್ವದ ಅಧಿಕಾರಾವಧಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಮಮುನುಲ್ ಹಕ್ ಅವರನ್ನು ಬಂಧಿಸಲಾಗಿತ್ತು. ಆದರೆ ಕಳೆದ ತಿಂಗಳು ಸರ್ಕಾರಿ ವಿರೋಧಿ ಪ್ರತಿಭಟನೆ ನಡುವೆಯೇ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ, ಮಧ್ಯಂತರ ಸರ್ಕಾರವು ಮಾಮುನುಲ್ ಹಕ್ ಮತ್ತು ಇತರ ಉಗ್ರಗಾಮಿ ನಾಯಕರನ್ನು ಬಿಡುಗಡೆ ಮಾಡಿದೆ.

ಮಧ್ಯಂತರ ಸರ್ಕಾರವು ದೇಶದ ಅತಿದೊಡ್ಡ ಇಸ್ಲಾಮಿ ಪಕ್ಷವಾದ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ಸಹ ತೆಗೆದುಹಾಕಿತು, ಇದು ಹಸೀನಾ ಅವರ ಉಚ್ಚಾಟನೆಯ ನಂತರ ಹಿಂದೂಗಳ ಮೇಲಿನ ದಾಳಿಗಳ ಆತಂಕದ ನಡುವೆ ನೆರೆಯ ಭಾರತವನ್ನು ಚಿಂತೆಗೀಡು ಮಾಡಿದೆ. ಇತ್ತೀಚೆಗೆ, ಮಧ್ಯಂತರ ಸರ್ಕಾರವು ಅಲ್-ಖೈದಾ-ಸಂಯೋಜಿತ ಭಯೋತ್ಪಾದಕ ಸಂಘಟನೆಯಾದ ಅನ್ಸಾರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಮುಖ್ಯಸ್ಥ ಜಶಿಮುದ್ದೀನ್ ರಹಮಾನಿಯನ್ನು ಬಿಡುಗಡೆ ಮಾಡಿತು. ಭಯೋತ್ಪಾದಕ ಗುಂಪು ಸ್ಲೀಪರ್ ಸೆಲ್‌ಗಳ ಸಹಾಯದಿಂದ ಜಿಹಾದಿ ಜಾಲವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುವುದರಿಂದ ಬಿಡುಗಡೆಯು ಭಾರತಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೆಫಾಜತ್-ಎ-ಇಸ್ಲಾಂ ಅನ್ನು 2010 ರಲ್ಲಿ ಸ್ಥಾಪನೆಗೊಂಡಿದ್ದು, ಇದು ಸಂಪ್ರದಾಯವಾದಿ ಇಸ್ಲಾಮಿಕ್ ಮೌಲ್ಯಗಳನ್ನು ಆಧರಿಸಿದೆ. ಈ ಗುಂಪು ಆಗಾಗ್ಗೆ ಸಾಂವಿಧಾನಿಕ ತತ್ವಗಳು ಮತ್ತು ಸಾಮಾಜಿಕ ಸುಧಾರಣೆಗಳನ್ನು ವಿರೋಧಿಸುತ್ತದೆ. ಅವರ ಚಟುವಟಿಕೆಗಳು, ಮದರಸಾಗಳನ್ನು ನಡೆಸುವುದು ಮತ್ತು ಇಸ್ಲಾಮಿಕ್ ಕ್ರಾಂತಿಯ ವಿಚಾರಗಳನ್ನು ಪ್ರಚಾರ, ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ಹೀಗೆ ಹಲವಾರು ಕುಕೃತ್ಯಗಳ ಮೂಲಕವೇ ಕುಖ್ಯಾತಿ ಪಡೆದಿದೆ.

ಮಾಮುನುಲ್ ಹಕ್ ಹೆಫಾಜತ್-ಎ-ಇಸ್ಲಾಂನ ಮುಖಂಡನಾಗಿದ್ದಾನೆ. ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶದ ಭೇಟಿಯ ಸಂದರ್ಭದಲ್ಲಿ ಈ ಗುಂಪು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿತ್ತು. ಈ ಸಂಘಟನೆ ಭಾರತ ವಿರೋಧಿ ನಿಲುವು ಹೊಂದಿರುವುದಕ್ಕೆ ಇದು ಉದಾಹರಣೆಯಾಗಿದೆ.