Monday, 16th December 2024

Bashar Al-Assad: ಭಾರಿ ಸದ್ದು ಮಾಡುತ್ತಿದೆ ಸಿರಿಯಾದ ಪದಚ್ಯುತ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ನ ಅರೆನಗ್ನ ಫೋಟೊ

Bashar Al-Assad

ಡೆಮಾಸ್ಕಸ್‌: ಸಿರಿಯಾ (Syria)ದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದ್ದು, 24 ವರ್ಷಗಳ ಬಶರ್ ಅಲ್-ಅಸ್ಸಾದ್ (Bashar al-Assad) ಸರ್ಕಾರದ ಪತನವಾಗಿದೆ. ಬಂಡುಕೋರರ ಕಿಚ್ಚಿಗೆ ಬೆದರಿ ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಈ ಮಧ್ಯೆ ಬಂಡುಕೋರರು ಪದಚ್ಯುತ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ನಿವಾಸಕ್ಕೆ ನುಗ್ಗಿ 2 ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ನಾಯಕನ ಅರೆಬೆತ್ತಲೆ ಫೋಟೊಗಳನ್ನು ಬಹಿರಂಗಪಡಿಸಿದ್ದಾರೆ. ಅವರ ದಬ್ಬಾಳಿಕೆಯ ನಾಯಕತ್ವವನ್ನು ಟೀಕಿಸಿದ್ದಕ್ಕಾಗಿ ಕಿರುಕುಳಕ್ಕೊಳಗಾದರು ಇದೀಗ ಈ ಫೋಟೊಗಳನ್ನು ಮುಂದಿಟ್ಟುಕೊಂಡು ಟ್ರೋಲ್‌ ಮಾಡುತ್ತಿದ್ದಾರೆ (Viral News).

ಡಮಾಸ್ಕಸ್ ಮತ್ತು ಅಲೆಪ್ಪೊ ಬೆಟ್ಟಗಳಲ್ಲಿನ ಅಸ್ಸಾದ್ ಅವರ ಬಂಗಲೆಗಳಿಂದ ಬಂಡುಕೋರರು ಫೋಟೊ ಆಲ್ಬಂಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಶರ್ ಅಲ್-ಅಸ್ಸಾದ್ ಮತ್ತು ಅವರ ತಂದೆ ಹಫೀಜ್ ಅಸ್ಸಾದ್ ಅವರ ಅರೆನಗ್ನ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ಕಿಚ್ಚು ಹಚ್ಚಿವೆ. ಟ್ರೋಲರ್‌ಗಳಂತೂ ಹಬ್ಬ ಮಾಡುತ್ತಿದ್ದಾರೆ.

ತಹೇವಾರಿ ಪೋಸ್‌

ಒಂದು ಫೋಟೊದಲ್ಲಂತೂ ಬಶರ್ ಅಲ್-ಅಸ್ಸಾದ್ ಖಾಲಿ ಒಳ ಉಡುಪಿನಲ್ಲಿ ನಿಂತು ಪೋಸ್ ನೀಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಅವರು ತಮ್ಮ ಭುಜದ ಮೇಲೆ ಹುಡುಗಿಯನ್ನು ಎತ್ತಿಕೊಂಡಿರುವುದು ಕಂಡು ಬಂದಿದೆ. ಹಲವು ಫೋಟೊಗಳಲ್ಲಿ ಅವರು ಒಳ ಉಡುಪು ಮಾತ್ರ ಧರಿಸಿದ್ದಾರೆ. ನೀರಿನೊಳಗೆ, ಗಾಲಿ ಕುರ್ಚಿಯಲ್ಲಿ ಮತ್ತು ದೋಣಿಯಲ್ಲಿ ತಮ್ಮ ಬೈಸೆಪ್ಸ್ ಪ್ರದರ್ಸಿಸುತ್ತಿರುವ ಫೋಟೊಗಳು ವೈರಲ್‌ ಆಗಿವೆ.

ಮತ್ತೊಂದು ಫೋಟೊದಲ್ಲಿ ಅವರು ಸಣ್ಣ ಸ್ಪೀಡೋ ಧರಿಸಿ ಇಬ್ಬರು ಮಹಿಳೆಯರೊಂದಿಗೆ ಕುಳಿತಿರುವುದನ್ನು ನೋಡಬಹುದು. ಜತೆಗೆ ಅವರು ಕ್ಯಾಮೆರಾದೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಅವರ ತಂದೆ ಹಫೀಜ್ ಅಸ್ಸಾದ್ ಕೂಡ ಒಳ ಉಡುಪು ಧರಿಸಿ ಬಾಡಿ ಬಿಲ್ಡರ್ ರೀತಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊಗಳೆಲ್ಲ ಹಲವರ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಫೋಟೊಗಳು ಸಿರಿಯಾದ ಕರಾಳ ಇತಿಹಾಸದ ಅಪಹಾಸ್ಯದಂತಿದೆ ಎಂದು ಹಲವರು ಬಣ್ಣಿಸಿದ್ದಾರೆ. ಅಸ್ಸಾದ್‌ ಅವರ ನಿರಂಕುಶ ಆಡಳಿತದಲ್ಲಿ ಸುಮಾರು 13 ವರ್ಷಗಳ ಕಾಲ ಅಂತರ್ಯುದ್ಧವು ನಡೆಯಿತು. ಈ ಸಂಘರ್ಷದಲ್ಲಿ 5 ಲಕ್ಷಕ್ಕೂ ಮಂದಿ ಜೀವ ಕಳೆದುಕೊಂಡರು ಮತ್ತು ಲಕ್ಷಾಂತರ ಸಿರಿಯನ್ನರು ಮನೆ-ಮಠ ತೊರೆದು ವಲಸೆ ಹೋಗುವಂತಾಯಿತು. ಸದ್ಯ ಕೆಲವರು ಈ ಅರೆನಗ್ನ ಫೋಟೊಗಳನ್ನು ಟ್ರೋಲ್‌ ಮಾಡುತ್ತಿದ್ದರೆ, ಇನ್ನು ಕೆಲವರಿಗೆ ಇದು ಗೇಲಿಯ ವಸ್ತುವಂತಾಗಿದೆ. ಹಲವರಂತೂ ಈ ಫೋಟೊಗಳನ್ನು ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ (Abu Mohammed al-Golani) ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ (HTS) ಬಂಡುಕೋರ ಪಡೆಗಳು ರಾಜಧಾನಿ ಹಮಾಸ್ಕಸ್‌ನಲ್ಲಿರುವ ಅಸ್ಸಾದ್‌ನ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುವುದರೊಂದಿಗೆ ಕಳೆದ ವಾರ ರಾಜಕೀಯ ಕ್ರಾಂತಿಯೇ ನಡೆಯಿತು. ಬಂಡುಕೋರರ ಆಕ್ರೋಶಕ್ಕೆ ತುತ್ತಾರ ಅಸ್ಸಾದ್‌ ತನ್ನ ಕುಟುಂಬದೊಂದಿಗೆ ದೇಶ ತೊರೆದಿದ್ದರು. ಹೀಗೆ ಡಿ. 8ರಂದು ಸಿರಿಯಾದ ಸರ್ಕಾರ ಪತನವಾಯಿತು.

ಈ ಸುದ್ದಿಯನ್ನೂ ಓದಿ: ಸಿರಿಯಾದಲ್ಲಿ ಬಷರ್‌ ಆಡಳಿತ ಕೊನೆಗೊಳಿಸಿದ ಅಬು ಮೊಹಮ್ಮದ್ ಅಲ್-ಗೊಲಾನಿಯ HTS ಸಂಘಟನೆ; ಏನಿದರ ಹಿನ್ನೆಲೆ?