Thursday, 12th December 2024

ಬಿಬಿಸಿಗೆ ಡಾ.ಸಮೀರ್ ಷಾ ಹೊಸ ಬಾಸ್​

ಲಂಡನ್: 40 ವರ್ಷಗಳಿಂದ ಇಂಗ್ಲೆಂಡ್​ನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಭಾರತ ಮೂಲದ ಡಾ.ಸಮೀರ್​ ಷಾ ರನ್ನು ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೋರೇಷನ್​ (ಬಿಬಿಸಿ) ಮೀಡಿಯಾದ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಸಮೀರ್​ ರನ್ನು ಬಿಬಿಸಿಯ ಹೊಸ ಬಾಸ್​ ಆಗಿ ಆಯ್ಕೆ ಮಾಡಲು ಹೌಸ್ ಆಫ್ ಕಾಮನ್ಸ್​ನ ಸಂಸದರು ಒಪ್ಪಿಗೆ ಸೂಚಿಸಿದ್ದಾರೆ. ಅವರ ನೇಮಕಾತಿ ಪೂರ್ವ ಪರಿಶೀಲನೆ ನಡೆಯಲಿದ್ದು, ಮೀಡಿಯಾ ಕಲ್ಚರ್, ಮೀಡಿಯಾ ಮತ್ತು ಸ್ಪೋರ್ಟ್ಸ್ ಸೆಲೆಕ್ಟ್ ಕಮಿಟಿಯ ಕ್ರಾಸ್ ಸಂಸದರು ಸಮೀರ್​ ಅವರ ಜೊತೆಗೆ ಪ್ರಶ್ನೋತ್ತರ ಸಂವಾದ ನಡೆಸಲಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಜೀನಾಮೆ ನೀಡಿದ್ದ ರಿಚರ್ಡ್ ಶಾರ್ಪ್ ಅವರ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ 40 ವರ್ಷಗಳಿಗೂ ಹೆಚ್ಚು ಕಾಲ ದುಡಿದಿರುವ ಡಾ.ಸಮೀರ್​ ಶಾ ಅವರು ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ಅವರ ಅನುಭವದ ಸಂಪತ್ತು ಮಾಧ್ಯಮದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಇಂಗ್ಲೆಂಡ್​ ಕಲ್ಚರಲ್​ ಕಾರ್ಯದರ್ಶಿ ಲೂಸಿ ಫ್ರೇಜರ್ ಹೇಳಿದರು.

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜನಿಸಿದ ಸಮೀರ್​ ಷಾ 1960 ರಲ್ಲಿ ಇಂಗ್ಲೆಂಡ್‌ಗೆ ವಲಸೆ ಬಂದಿದ್ದರು. ಇಲ್ಲಿಯೇ ನೆಲೆಸಿರುವ ಅವರು, ಈ ಹಿಂದೆ ಬಿಬಿಸಿಯಲ್ಲಿ ಬ್ಯುಸಿನೆಸ್​ ಅಂಡ್​ ಪೊಲಿಟಿಕಲ್​ ಈವೆಂಟ್​ ಮುಖ್ಯಸ್ಥರಾಗಿದ್ದರು. ಖಾಸಗಿ ದೂರದರ್ಶನ ಮತ್ತು ರೇಡಿಯೊ ನಿರ್ಮಾಣ ಕಂಪನಿಯಾದ ಜುನಿಪರ್‌ನ ಸಿಇಒ ಕೂಡ ಆಗಿದ್ದರು. 2007 ಮತ್ತು 2010 ರ ನಡುವೆ ಬಿಬಿಸಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.