ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ (ನಾಸಾ) ಸಂಸ್ಥೆಯು ಹಂಗಾಮಿ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಭಾರತ ಮೂಲದ ಭವ್ಯಾ ಲಾಲ್ ರನ್ನು ನೇಮಿಸಿದೆ.
ನಾಸಾದ ಹಂಗಾಮಿ ಸಿಬ್ಬಂದಿ ಮುಖ್ಯಸ್ಥರಾಗಿ ಭವ್ಯಾ ಲಾಲ್ ಆಯ್ಕೆಯಾಗಿದ್ದರೆ, ಫಿಲಿಪ್ ಥಾಂಪ್ಸನ್ ಅವರು ಶ್ವೇತಭವನದ ಸಂಪರ್ಕಾಧಿಕಾರಿಯಾಗಲಿದ್ದಾರೆ. ಶಾಸನ ಕಚೇರಿ ಮತ್ತು ಅಂತರ್ ಸರ್ಕಾರಿ ವ್ಯವಹಾರಗಳ ಸಹ ಆಡಳಿತಾಧಿಕಾರಿಯಾಗಿ ಅಲೈಸಿಯಾ ಬ್ರೌನ್ ರನ್ನು ನೇಮಿಸಲಾಗಿದೆ.
ಭವ್ಯಾ ಲಾಲ್ ಅವರು ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರು 2005 ರಿಂದ 2020ರವರೆಗೂ ರಕ್ಷಣಾ ವಿಶ್ಲೇಷಣೆ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಸ್ಥೆಯ (ಎಸ್‌ಟಿಪಿಐ) ಸಂಶೋಧನಾ ಸಿಬ್ಬಂದಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಸಿ-ಎಸ್‌ಟಿಪಿಎಸ್ ಎಲ್‌ಎಲ್‌ಸಿಯ ಅಧ್ಯಕ್ಷರಾಗಿದ್ದರು. ಇದು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಶೋಧನೆ ಮತ್ತು ಸಲಹಾ ಸಂಸ್ಥೆಯಾಗಿದೆ. ಮಸಾಷುಯೆಟ್ಸ್‌ನ ಜಾಗತಿಕ ನೀತಿ ಸಂಶೋಧನಾ ಸಂಪರ್ಕ ಸಂಸ್ಥೆಯಾದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಅಧ್ಯಯನಗಳ ಕೇಂದ್ರದ ನಿರ್ದೇಶಕಿಯಾಗಿದ್ದರು.