ಹಾಲಿನ ಬಣ್ಣ (Milk color) ಯಾವುದು ಎಂದು ಯಾರ ಬಳಿಯಾದರೂ ನೀವು ಪ್ರಶ್ನಿಸಲು ಹೋದರೆ ಎಲ್ಲರೂ ನಿಮ್ಮನ್ನು ಮೂರ್ಖರು ಎನ್ನಬಹುದು. ಯಾಕೆಂದರೆ ಹಾಲಿನ ಬಣ್ಣ ಬಿಳಿ (White milk) ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಇನ್ನು ಈ ಪ್ರಶ್ನೆಯನ್ನು ಕೇಳಬಹುದು. ಯಾಕೆಂದರೆ ಪ್ರಪಂಚದಲ್ಲಿ ಬಿಳಿ ಬಣ್ಣವಾಗಿಲ್ಲದ (Black Milk) ಹಾಲು ಕೂಡ ಇದೆ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪ್ರತಿನಿತ್ಯ ಉಪಯೋಗಿಸುವ ಹಾಲು ಬಿಳಿ ಬಣ್ಣದ್ದೇ ಆಗಿರುತ್ತದೆ. ಹೆಚ್ಚಾಗಿ ಎಲ್ಲರ ಮನೆಯಲ್ಲೂ ಹಸು, ಎಮ್ಮೆ, ಆಡಿನ ಹಾಲನ್ನು ಬಳಸುತ್ತಾರೆ. ಇದರಲ್ಲಿಯೇ ಟೀ, ಕಾಫಿ ಮಾಡಿ ಸೇವಿಸುತ್ತಾರೆ. ಆರೋಗ್ಯಕರ ಜೀವನಕ್ಕೆ ಹಾಲು ಬಹಳ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನವಜಾತ ಶಿಶುಗಳಿಗೆ ತಾಯಿಯ ಹಾಲು, ಮಗು ಬೆಳೆದಾಗ ಹಸು, ಎಮ್ಮೆ, ಆಡಿನ ಹಾಲನ್ನು ನೀಡಲಾಗುತ್ತದೆ. ಮಗುವಿನ ಪೋಷಣೆಗೆ ಹಾಲು ಅತ್ಯಂತ ಮುಖ್ಯವಾಗಿದೆ.
ಪ್ರಪಂಚದ ಬಹುತೇಕ ಪ್ರಾಣಿಗಳ ಹಾಲು ಬಿಳಿಯಾಗಿರುತ್ತದೆ. ಹೀಗಿರುವಾಗ ಬಿಳಿ ಬಣ್ಣವಲ್ಲದ ಹಾಲು ಇದೆ ಎಂದು ಯಾರಾದರೂ ಹೇಳಿದರೆ ನಂಬಲು ಅಸಾಧ್ಯವೇ ಸರಿ. ಆದರೆ ಈ ಪ್ರಪಂಚದಲ್ಲೇ ಬಿಳಿ ಬಣ್ಣವಲ್ಲದ ಹಾಲು ಕೂಡ ಇದೆ. ಹೌದು ಈ ಒಂದು ಪ್ರಾಣಿ ಕಪ್ಪು ಹಾಲನ್ನು (black rhinoceros milk color) ಕೊಡುತ್ತದೆ ಎಂದರೆ ಎಲ್ಲರೂ ನಂಬಲೇಬೇಕು.
ಹೆಣ್ಣು ಕಪ್ಪು ಘೇಂಡಾಮೃಗವು ಕಪ್ಪು ಹಾಲನ್ನು ನೀಡುತ್ತದೆ. ಅವುಗಳನ್ನು ಆಫ್ರಿಕನ್ ಬ್ಲ್ಯಾಕ್ ರೈನೋ ಎಂದೂ ಕರೆಯುತ್ತಾರೆ. ಕಪ್ಪು ಘೇಂಡಾಮೃಗದ ಹಾಲಿನಲ್ಲಿ ಕನಿಷ್ಠ ಪ್ರಮಾಣದ ಕೆನೆ ಇರುತ್ತದೆ. ತಾಯಿ ಘೇಂಡಾಮೃಗದ ಹಾಲು ನೀರಿನಂತೆ ತೆಳುವಾಗಿದ್ದು, ಇದು ಕೇವಲ 0.2ರಷ್ಟು ಕೊಬ್ಬನ್ನು ಹೊಂದಿರುತ್ತದೆ. ಈ ತೆಳುವಾದ ಹಾಲು ಪ್ರಾಣಿಗಳ ನಿಧಾನ ಸಂತಾನೋತ್ಪತ್ತಿ ಚಕ್ರಕ್ಕೆ ಸಂಬಂಧಿಸಿರಬಹುದು ಎನ್ನುತ್ತಾರೆ ಸಂಶೋಧಕರು.
ಕಪ್ಪು ಘೇಂಡಾಮೃಗಗಳು ನಾಲ್ಕರಿಂದ ಐದು ವರ್ಷಗಳ ವಯಸ್ಸನ್ನು ತಲುಪಿದ ಅನಂತರವೇ ಸಂತಾನೋತ್ಪತ್ತಿ ಮಾಡುತ್ತದೆ. ಅವುಗಳ ಗರ್ಭಧಾರಣೆಯ ಅವಧಿ ಒಂದು ವರ್ಷಕ್ಕಿಂತ ಹೆಚ್ಚು. ಒಂದು ಬಾರಿಗೆ ಕೇವಲ ಒಂದು ಕರುವಿಗೆ ಮಾತ್ರ ಜನ್ಮ ನೀಡುತ್ತದೆ. ಗರ್ಭವಾಸ್ಥೆ ಮತ್ತು ಮಗುವಿನ ಪೋಷಣೆಯ ಅವಧಿಯಲ್ಲಿ ಹೆಣ್ಣು ಘೇಂಡಾಮೃಗಗಳು ಒಂಟಿಯಾಗಿಯೇ ವಾಸಿಸುತ್ತವೆ. ಅನಂತರ ತನ್ನ ಮಗುವನ್ನು ಬೆಳೆಸಲು ಸಾಕಷ್ಟು ಸಮಯ ನೀಡುತ್ತದೆ. ಸುಮಾರು ಒಂದು ವರ್ಷದವರೆಗೂ ಅವುಗಳು ತಮ್ಮ ಕರುವಿಗೆ ಹಾಲುಣಿಸುತ್ತವೆ. ಕರುಗಳು ಸುಮಾರು 2- 4 ವರ್ಷಗಳ ಕಾಲ ತಾಯಿಯೊಂದಿಗೆ ಇರುತ್ತವೆ.
ಕೀನ್ಯಾ, ಟಾಂಜಾನಿಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಸಿಗುವ ಕಪ್ಪು ಘೇಂಡಾಮೃಗಗಳು ಅಳಿವಿನಂಚಿನಲ್ಲಿದ್ದು, ಈಗ ಪ್ರಪಂಚದಲ್ಲಿ ಅವುಗಳ ಸಂಖ್ಯೆ ಸುಮಾರು 6,000 ಮಾತ್ರ ಇದೆ. ಇವುಗಳು ಸಾಮಾನ್ಯವಾಗಿ 5.2 ಅಡಿ ಎತ್ತರ ಬೆಳೆಯುತ್ತದೆ. ಅರೆ-ಮರುಭೂಮಿ ಸವನ್ನಾ, ಕಾಡು ಪ್ರದೇಶ, ಅರಣ್ಯ, ಜೌಗು ಪ್ರದೇಶಗಳಲ್ಲಿ ವಾಸಿಸುತ್ತವೆ.
ಕಪ್ಪು ಘೇಂಡಾಮೃಗಗಳು ಬಿಳಿ ಘೇಂಡಾಮೃಗಗಳಿಗಿಂತ ಚಿಕ್ಕದಾಗಿರುತ್ತವೆ. ಅವುಗಳ ಕತ್ತಿನ ಹಿಂಭಾಗದಲ್ಲಿ ಗೂನು ಹೊಂದಿರುತ್ತವೆ. ಕಪ್ಪು ಮತ್ತು ಬಿಳಿ ಘೇಂಡಾಮೃಗಗಳ ನಡುವಿನ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಕಪ್ಪು ಘೇಂಡಾಮೃಗಗಳು ಕೊಕ್ಕೆಯಾಕಾರದ ತುಟಿಯನ್ನು ಹೊಂದಿರುತ್ತವೆ.