Saturday, 23rd November 2024

ಸಂಸತ್​ ಸ್ಥಾನಕ್ಕೂ ರಾಜೀನಾಮೆ ನೀಡಿದ ಬೋರಿಸ್​ ಜಾನ್ಸನ್

ಲಂಡನ್: ​ಕರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕೆ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದ ಇಂಗ್ಲೆಂಡ್​ ಮಾಜಿ ಪಿಎಂ ಬೋರಿಸ್​ ಜಾನ್ಸನ್​ ಇದೀಗ ಸಂಸತ್​ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಸಂಸತ್​ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಬೋರಿಸ್​ ಜಾನ್ಸನ್​ ಅವರು ಪಾರ್ಟಿಗೇಟ್ ಹಗರಣದಲ್ಲಿ ಸಿಲುಕಿ ಟೀಕೆಗೆ ಗುರಿಯಾಗಿದ್ದಲ್ಲದೇ, ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿದಿದ್ದರು. ಜಾನ್ಸನ್ ಅವರು ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ಕಟ್ಟಡದಲ್ಲಿ ನಿಯಮ ಉಲ್ಲಂಘಿಸಿ ತನ್ನ ಸಹಾಯಕರಾಗಿದ್ದ ಮಾರ್ಟಿನ್ ರೆನಾಲ್ಡ್ಸ್ ಮತ್ತು ಶೆಲ್ಲಿ ವಿಲಿಯಮ್ಸ್ ವಾಕರ್ ಸೇರಿದಂತೆ ಹಲವು ಜನರೊಂದಿಗೆ ಪಾನಕೂಟದಲ್ಲಿ ಭಾಗಿಯಾಗಿದ್ದರು.

ಹಠಾತ್ತಾಗಿ ಸಂಸತ್​ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿರುವ ಬೋರಿಸ್​ ಜಾನ್ಸನ್, ನಾನು ​ಆಕ್ಸ್‌ಬ್ರಿಡ್ಜ್ ಮತ್ತು ಸೌತ್ ರುಯಿಸ್ಲಿಪ್‌ ನಲ್ಲಿರುವ ನನ್ನ ಅಸೋಸಿಯೇಷನ್‌ಗೆ ಪತ್ರ ಬರೆದಿದ್ದು, ನಾನು ತಕ್ಷಣವೇ ಸಂಸದ ಸ್ಥಾನದಿಂದ ಕೆಳೆಗೆ ಇಳಿಯುತ್ತಿದ್ದೇನೆ. ನನ್ನ ಅದ್ಭುತ ಕ್ಷೇತ್ರವನ್ನು ತೊರೆಯಲು ನನಗೆ ತುಂಬಾ ವಿಷಾದವಿದೆ. ಮೇಯರ್ ಮತ್ತು ಸಂಸದರಾಗಿ ಸಲ್ಲಿಸಿದ ನನ್ನ ಸೇವೆ ಕುರಿತು ನನಗೆ ಅಪಾರ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ನಾನು ಹಗರಣ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು ಹೇಳಿಲ್ಲ. ತನಿಖಾ ಸಮಿತಿ ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಯಾವ ಪುರಾವೆಯನ್ನೂ ನೀಡಿಲ್ಲ. ನಾನು ಸದನದಲ್ಲಿ ಸತ್ಯವನ್ನೇ ಮಾತನಾಡಿದ್ದೇನೆ. ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ಇದೇ ವೇಳೆ ಮಾಜಿ ಪ್ರಧಾನಿ ಆರೋಪಿಸಿದ್ದಾರೆ.

ಈ ವರ್ಷದ ಮಾರ್ಚ್​ನಲ್ಲಿ ಜಾನ್ಸನ್‌ರನ್ನು ಸಂಸದೀಯ ಸಮಿತಿಯು ಪದೇ ಪದೇ ನೀವು ಕೋವಿಡ್​ ನಿಯಮವಿದ್ದ ಸಮಯದಲ್ಲಿ ಪಾರ್ಟಿಗೆ ಹಾಜ ರಾಗಿದ್ದೀರಾ, ಲಾಕ್​ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದೀರಾ, ಸಂಸತನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ ರಾಜೀನಾಮೇ ನೀಡಬೇಕು ಎಂದು ಕೇಳುತ್ತಿದ್ದರು.