Thursday, 12th September 2024

ಏಪ್ರಿಲ್‌ ತಿಂಗಳಾಂತ್ಯಕ್ಕೆ ಭಾರತಕ್ಕೆ ಬ್ರಿಟನ್ ಪ್ರಧಾನಿ ಭೇಟಿ

ಲಂಡನ್: ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಎರಡು ಬಾರಿ ಭಾರತ ಭೇಟಿಯನ್ನು ರದ್ದುಗೊಳಿಸಿದ್ದರು. ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 22 ರ ಸುಮಾರಿಗೆ ಅವರು ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.  ಕಳೆದ ತಿಂಗಳು ಜಾನ್ಸನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿ ಪ್ರವಾಸದ ಅವಧಿಯನ್ನು ನಿಗದಿ ಪಡಿಸಿದ್ದಾರೆ. ಈವರೆಗೂ ಬ್ರಿಟನ್‍ನ ಪ್ರಧಾನಿ ಕಚೇರಿ ಮೂಲಗಳು ಅಧಿಕೃತವಾದ ಯಾವದೇ ಪ್ರಕಟಣೆಯನ್ನು ಹೊರಡಿಸಿಲ್ಲ.

ಕಳೆದ ವರ್ಷ ನವೆಂಬರ್‍ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಪ್ 26 ಹವಾಮಾನ ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿ ಯಾಗಿದ್ದರು.

2030 ರ ವೇಳೆಗೆ ಭಾರತ ಮತ್ತು ಬ್ರಿಟನ್ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ಯೊಂದಿಗೆ ಪ್ರಯತ್ನಗಳು ಮುಂದುವರೆದಿವೆ. ಈ ನಿಟ್ಟಿನಲ್ಲಿ ಮತ್ತಷ್ಟು ಮುಕ್ತ ಮಾತುಕತೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರು ಕಳೆದ ವಾರ ದೆಹಲಿಗೆ ಭೇಟಿ ನೀಡಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‍ರೊಂದಿಗೆ ಮಾತುಕತೆ ನಡೆಸಿದರು.