ನವದೆಹಲಿ: ಭಾರತೀಯ ಸೇರಿದಂತೆ ಸಾವಿರಾರು ವಿದೇಶಿ ವಿದ್ಯಾರ್ಥಿಗಳಿಗೆ ʼಸ್ಟುಡೆಂಟ್ ಡೈರೆಕ್ಟ್ ಸ್ಟ್ರೀಮ್ (SDS) ಯೋಜನೆಯನ್ನು ನೀಡುತ್ತಿದ್ದ ವೀಸಾವನ್ನು (Canada Visa) ಕೆನಡಾ ಸರ್ಕಾರ ಶನಿವಾರ (ನ.9) ಹಠಾತ್ ಮುಕ್ತಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಿದ್ಯಾಭ್ಯಾಸ ನಡೆಸಲು ಕನಸು ಕಂಡಿದ್ದ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ಭಾರಿ ನಿರಾಶೆಯಾಗಿದೆ.
ಎಸ್‌ಡಿಎಸ್ ಯೋಜನೆ ಅಡಿಯಲ್ಲಿ ಸಾವಿರಾರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತ್ವರಿತವಾಗಿ ವೀಸಾ ಪಡೆಯಲು ಸಹಾಯ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕೆಲವು ಷರತ್ತುಗಳು ಕಡ್ಡಾಯವಾಗಿದ್ದರೂ, ವಿದ್ಯಾರ್ಥಿಗಳು ಕೆಲವೇ ವಾರಗಳಲ್ಲಿ ವೀಸಾ ಪರವಾನಗಿಯನ್ನು ಪಡೆಯುತ್ತಿದ್ದರು. ಕೆನಡಾ ಸರ್ಕಾರವು ತನ್ನ ವೆಬ್‌ಸೈಟ್‌ನಲ್ಲಿ ‘ಕಾರ್ಯಕ್ರಮದ ಸಮಗ್ರತೆಯನ್ನು ಬಲಪಡಿಸಲು, ವಿದ್ಯಾರ್ಥಿಗಳ ದುರ್ಬಲತೆಗಳನ್ನು ಪರಿಹರಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಜಿ ಪ್ರಕ್ರಿಯೆಗೆ ಸಮಾನ ಮತ್ತು ನ್ಯಾಯಯುತ ಪ್ರವೇಶವನ್ನು ಒದಗಿಸಲು’ ಈ ಯೋಜನೆಯನ್ನು ನಿಲ್ಲಿಸಲಾಗುತ್ತಿದೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಎಸ್‌ಡಿಎಸ್ ಯೋಜನೆಯನ್ನು ೨೦೧೮ರಲ್ಲಿ ಪರಿಚಯಿಸಲಾಗಿತ್ತು
ಕೆನಡಾ ಸರ್ಕಾರವು 2018ರಲ್ಲಿ ಈ ಯೋಜನೆಯನ್ನು ವಿದೇಶಿ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿತ್ತು. ಆ ಮೂಲಕ ಬ್ರೆಜಿಲ್, ಚೀನಾ, ಕೊಲಂಬಿಯಾ, ಕೋಸ್ಟಾರಿಕಾ, ಭಾರತ, ಮೊರಾಕೊ, ಪಾಕಿಸ್ತಾನ, ಪೆರು, ಫಿಲಿಪೈನ್ಸ್, ವಿಯಟ್ನಾಂ ಸೇರಿದಂತೆ 14 ದೇಶಗಳ ವಿದ್ಯಾರ್ಥಿಗಳಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಆದಾಗ್ಯೂ, ಕೆಲವು ಅವಶ್ಯಕತೆಗಳನ್ನು ಪೂರೈಸಬೇಕಾಗಿತ್ತು. ಆದರೆ, ಇದೀಗ ಕೆನಡಾ ಸರ್ಕಾರ ಈ ಯೋಜನೆಯನ್ನು ಕೆಲ ಅಗತ್ಯತೆಗಳ ಸಲುವಾಗಿ ಹಠಾತ್ ನಿಲ್ಲಿಸಿದೆ.
ನವೆಂಬರ್ 8 ರ ಮಧ್ಯಾಹ್ನ 2 ಗಂಟೆಗೆ ಅಂತ್ಯ
ಈ ಯೋಜನೆಯಡಿ ನವೆಂಬರ್ 8 ರಂದು ಮಧ್ಯಾಹ್ನ 2 ಗಂಟೆಗೆ ಸ್ವೀಕೃತವಾದ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಆದರೆ ಇದರ ನಂತರದ ಎಲ್ಲಾ ಅರ್ಜಿಗಳನ್ನು ನಿಯಮಿತ ಪರ್ಮಿಟ್ ಸ್ಟ್ರೀಮ್ ಅಡಿಯಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಈ ಕಾರ್ಯಕ್ರಮವನ್ನುನಿಲ್ಲಿಸುವುದರೊಂದಿಗೆ, ಭಾರತ ಮತ್ತು ಇತರ 13 ದೇಶಗಳ ವಿದ್ಯಾರ್ಥಿಗಳು ದೀರ್ಘಾವಧಿಯ ವೀಸಾ ಪ್ರಕ್ರಿಯೆಗಳ ಮೂಲಕ ಹೋಗಬೇಕಾಗುತ್ತದೆ.
ಭಾರತೀಯರ ಮೇಲೆ ಪರಿಣಾಮ ಹೇಗೆ?
ವಿದ್ಯಾಭ್ಯಾಸಕ್ಕೆ ಕೆನಡಾ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ಹಲವು ದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಡಯಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಅಲ್ಲಿಗೆ ಹೋಗುತ್ತಾರೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದ ಭಾರತ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 13.35 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಸುಮಾರು 4.27 ಲಕ್ಷ ಮಂದಿ ಕೆನಡಾದಲ್ಲಿದ್ದಾರೆ. 2013 ಮತ್ತು 2022ರ ನಡುವೆ, ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 260 ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಎಸ್‌ಡಿಎಸ್ ಯೋಜನೆಯ ಮೇಲೆ ಚುನಾವಣೆಯ ಪರಿಣಾಮ?
ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿ ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಲು ಕೆನಡಾ ಪ್ರಯತ್ನಿಸುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಟ್ರುಡೊ ಸರ್ಕಾರದ ಈ ಹೆಜ್ಜೆ ನಾಟಕೀಯ ನೀತಿ ಬದಲಾವಣೆ ಎಂದು ಬಣ್ಣಿಸಲಾಗುತ್ತಿದೆ. ಕೆನಡಾ ಹಿಂದಿನಿಂದಲೂ ಹೊಸ ಜನರನ್ನು ಸ್ವಾಗತಿಸುವ ಹೆಮ್ಮೆಯ ದೇಶವಾಗಿತ್ತು, ಆದರೆ ಈಗ ಅದೇ ದೇಶವು ವಲಸಿಗರ ಕಡೆಗೆ ಹೇಳಿಕೆಗಳನ್ನು ನೀಡುತ್ತಿದೆ, ಇದು ವಸತಿ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. 2025ರ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆಗಳು ನಡೆಯಲಿರುವುದರಿಂದ ಈ ವಿಷಯವು ದೇಶದ ರಾಜಕೀಯದಲ್ಲಿ ಅತ್ಯಂತ ವಿವಾದಾತ್ಮಕ ವಿಷಯವಾಗಿದೆ.
ಈ ಸುದ್ದಿಯನ್ನು ಓದಿ: Hindu Janajagruti Samiti: ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ; ಕಠಿಣ ಕ್ರಮಕ್ಕೆ ಆಗ್ರಹ