Friday, 13th December 2024

ಏರ್‌ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ನೀಡಿ: ಕೆನಡಾ ಸರ್ಕಾರಕ್ಕೆ ಭಾರತ ಆಗ್ರಹ

ಒಟ್ಟಾವ: ಏರ್‌ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಕೆನಡಾ ಸರ್ಕಾರಕ್ಕೆ ಭಾರತ ಆಗ್ರಹಿಸಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನವಾದ ನ.19ರಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ಹಾಕಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ವಿಡಿಯೊ ಕುರಿತು ಒಟ್ಟಾವದಲ್ಲಿರುವ ಭಾರತದ ಹೈ ಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಪ್ರತಿಕ್ರಿಯಿಸಿದ್ದು, ‘ಕೆನಡಾದಿಂದ ಭಾರತಕ್ಕೆ ಆಗಮಿಸುವ, ಭಾರತದಿಂದ ಕೆನಡಾಗೆ ತೆರಳುವ ಏರ್‌ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂಬುದಾಗಿ ಭಾರತ ಕೆನಡಾ ಸರ್ಕಾರಕ್ಕೆ ಕೋರುತ್ತದೆ. ಭಾರತದಿಂದ ಕೆನಡಾ ನಗರಗಳಾದ ಟೊರಂಟೊ, ವ್ಯಾಂಕವರ್‌ಗೆ ವಾರದಲ್ಲಿ ಹಲವು ವಿಮಾನಗಳು ಸಂಚರಿಸುತ್ತವೆ. ಹಾಗಾಗಿ ಭಾರತವು ಕೆನಡಾ ಸರ್ಕಾರಕ್ಕೆ ಭದ್ರತೆ ಒದಗಿಸುವಂತೆ ಆಗ್ರಹಿಸಿದೆ.

ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊದಲ್ಲಿ ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದಾನೆ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ.