Saturday, 23rd November 2024

ಫಾಲ್ಸ್ ಸೇತುವೆ ಮೇಲೆ ಕಾರು ದಿಢೀರ್ ಸ್ಫೋಟ

ನ್ಯೂಯಾರ್ಕ್: ನಯಾಗರಾ ಜಲಪಾತ ಬಳಿ ಇರುವ ಕೆನಡಾ ಮತ್ತು ಅಮೆರಿಕವನ್ನು ಸಂಪರ್ಕಿಸುವ ರೈನ್‌ಬೋ ಸೇತುವೆಯ ಮೇಲೆ ಕಾರು ಸ್ಫೋಟಗೊಂಡು ಚಾಲಕ ಹಾಗೂ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಮೆರಿಕದ ಭದ್ರತಾ ತಂಡಗಳು ಕಟ್ಟೆಚ್ಚರ ವಹಿಸಿವೆ. ಭಯೋತ್ಪಾದಕರ ದಾಳಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಘಟನೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ನ್ಯೂಯಾರ್ಕ್ ಮತ್ತು ದಕ್ಷಿಣ ಒಂಟಾರಿಯೊ ನಡುವಿನ ಇತರ ಮೂರು ಅಂತರ ರಾಷ್ಟ್ರೀಯ ಗಡಿ ಕಾರ್ಯ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಅಧಿಕಾರಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಘಟನೆಯ ತನಿಖೆಗಾಗಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ನಿಯೋಜಿಸಲಾಗಿದೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೃತರ ಗುರುತು ಮತ್ತು ಉದ್ದೇಶದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಚಾಲಕನ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮೊದಲು ಅಪಘಾತ ಸಂಭವಿಸಿದೆ, ನಂತರ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ” ಎಂದು ಸಿಬಿಪಿ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತು ಥ್ಯಾಂಕ್ಸ್ಗಿವಿಂಗ್ ಎಂಬ ಕಾರ್ಯಕ್ರಮದ ಮುನ್ನಾದಿನ ಅಮೆರಿಕದಲ್ಲಿ ರಜೆ ಇರುವ ಕಾರಣ ದಿಂದಾಗಿ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿತ್ತು. ಇದರ ನಡುವೆ ಈ ಘಟನೆ ನಡೆದಿದೆ. ಆದ್ದರಿಂದ ಗಂಭೀರವಾಗಿ ಪರಿಗಣಿಸ ಲಾಗಿದೆ. ಬಫೆಲೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಸ್ಫೋಟದಿಂದ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದು ನಯಾಗರಾ ಫಾಲ್ಸ್ ಮೆಮೋರಿಯಲ್ ಮೆಡಿಕಲ್ ಸೆಂಟರ್ ಹೇಳಿದೆ.