Thursday, 21st November 2024

Viral News: ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ ಕಾರಣಕ್ಕೆ ಸಿಟ್ಟಾದ ಬಾಸ್; 99 ಉದ್ಯೋಗಿಗಳು ವಜಾ

Viral News

ನ್ಯೂಯಾರ್ಕ್‌: ಕಚೇರಿಗಳಲ್ಲಿ ಆಗಾಗ್ಗೆ ಮೀಟಿಂಗ್‌ ಗಳು ನಡೆಯುತ್ತಿರುತ್ತವೆ. ವರ್ಚುವಲ್‌ (Virtual) ಮೀಟಿಂಗ್‌ ಸೇರಿದಂತೆ ಹತ್ತು ಹಲವು ಮೀಟಿಂಗ್‌ಗಳು ನಡೆಯುವುದನ್ನು ನೀವೂ ಗಮನಿಸಿರಬಹುದು. ಇಲ್ಲೊಂದು ಕಂಪೆನಿ ಪ್ರತಿದಿನವೂ ಉದ್ಯೋಗಿಗಳ ಮೀಟಿಂಗ್‌ ನಡೆಸುತ್ತದೆ. ಅದರಂತೆ ಆ ದಿನಿವೂ ಬೆಳಗ್ಗೆಯೇ ಮೀಟಿಂಗ್‌ ಆರಂಭವಾಗಿದೆ. ಆದರೆ 110 ಮಂದಿ ಇರುವ ಆಫೀಸ್‌ ನಲ್ಲಿ ಕೇವಲ 11 ಉದ್ಯೋಗಿಗಳು ಮಾತ್ರ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಸಿಇಒ (CEO) ಕೆರಳಿದ್ದಾರೆ. ಮೀಟಿಂಗ್‌ ಮುಗಿದ ಕೂಡಲೇ ಮುಲಾಜಿಲ್ಲದೆ ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ 99 ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ. ಈ ಘಟನೆ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ (Viral News).

ಅಮೆರಿಕ ಮೂಲದ ಕಂಪೆನಿಯೊಂದರಲ್ಲಿ ಈ ಸಮೂಹ ಉದ್ಯೋಗ ಅಮಾನತು ಪ್ರಕ್ರಿಯೆ ನಡೆದಿದೆ. ಕಂಪೆನಿ ಸಿಇಒ ಬಾಲ್‌ ಡ್ವಿನ್‌(Baldwin) ಈ ನಿರ್ಧಾರ ಘೋಷಿಸಿ ಇದೀಗ ಸಾಕಷ್ಟು ಜನರಿಗೆ ಶಾಕ್‌ ನೀಡಿದ್ದಾರೆ. ಉದ್ಯೋಗಿಗಳು ಕಂಪನಿ ಮೀಟಿಂಗ್‌ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಉದ್ಯೋಗಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸಿಇಒ ಗಂಭೀರವಾದ ನಿರ್ಧಾರಕ್ಕೆ ಮುಂದಾಗಿದ್ದಾರೆ. ಮೀಟಿಂಗ್‌ ಮುಗಿಸಿದ ಕೆಲವೇ ನಿಮಿಷಗಳಲ್ಲಿ ಮೀಟಿಂಗ್‌ನಲ್ಲಿ ಪಾಲ್ಗೊಳ್ಳದ 99 ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದಾರೆ.

“ಆತ್ಮೀಯ ತಂಡದ ಸದಸ್ಯರೇ, ನಾನು ಕಂಪನಿ ಸಿಇಒ ಬಾಲ್‌ ಡ್ವಿನ್‌. ಬೆಳಗ್ಗೆ ನಡೆದ ಮೀಟಿಂಗ್‌ ನಲ್ಲಿ ಯಾರೆಲ್ಲ ಪಾಲ್ಗೊಂಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರಿಗೆ ಇದು ಅಧಿಕೃತ ನೋಟಿಸ್.‌ ಮೀಟಿಂಗ್‌ನಲ್ಲಿ ಭಾಗಿಯಾಗದ ನಿಮ್ಮೆಲ್ಲರನ್ನು ಉದ್ಯೋಗದಿಂದ ವಜಾ ಮಾಡಲಾಗಿದೆ. ನೀವು ಕಂಪೆನಿಯೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಮರೆತಂತಿದೆ. ಮೀಟಿಂಗ್‌ನಲ್ಲಿ ಪಾಲ್ಗೊಳ್ಳದೆ ಕಂಪೆನಿಯ ನಿಯಮ ಉಲ್ಲಂಘನೆ ಮಾಡಿದ್ದೀರಿ” ಎಂದು ಸುದೀರ್ಘವಾದ ಸಂದೇಶವೊಂದು 99 ಉದ್ಯೋಗಿಗಳಿಗೆ ತಲುಪಿ ಅವರು ಕಂಗಾಲಾಗಿದ್ದಾರೆ.

ಸಂದೇಶ ಅಷ್ಟಕ್ಕೇ ಮುಗಿಯದೆ “ಈ ಕ್ಷಣದಿಂದಲೇ ಕಂಪೆನಿ ನಿಮ್ಮ ಜತೆಗೆ ಮಾಡಿಕೊಂಡ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸುತ್ತಿದ್ದೇವೆ. ನಿಮ್ಮಲ್ಲಿರುವ ನಮ್ಮ ಕಂಪೆನಿಯ ವಸ್ತುಗಳನ್ನು ಹಿಂತಿರುಗಿಸಿ. ಎಲ್ಲ ಖಾತೆಗಳಿಂದಲೂ ಸೈನ್‌ ಔಟ್‌ ಆಗಬೇಕು. ಕಂಪೆನಿ ಫ್ಲಾಟ್‌ಫಾರ್ಮ್‌ನಿಂದ ಸ್ವತಃ ನೀವೇ ಹೊರಬನ್ನಿ. ನಿಮ್ಮ ಭವಿಷ್ಯ ಮತ್ತು ಕೆರಿಯರ್‌ ಅನ್ನು ಉಜ್ವಲಗೊಳಿಸಿಕೊಳ್ಳಲು ಉತ್ತಮವಾದ ಅವಕಾಶವನ್ನು ನೀಡಿದ್ದೆ. ಆದರೆ ನೀವು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದೀರಿ. 110 ಉದ್ಯೋಗಿಗಳಿರುವ ಕಂಪೆನಿಯ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದು 11 ಉದ್ಯೋಗಿಗಳು ಮಾತ್ರ. ಆ ಹನ್ನೊಂದು ಉದ್ಯೋಗಿಗಳು ಕಂಪೆನಿಯೊಂದಿಗೆ ಮುಂದುವರಿಯುತ್ತಾರೆ. ಇನ್ನುಳಿದ ಉದ್ಯೋಗಿಗಳು ಈ ಕೂಡಲೇ ಕಂಪೆನಿ ತೊರೆಯಬೇಕಿದೆ” ಎಂದು ಖಡಕ್‌ ಆಗಿ ಬಾಸ್‌ ಇಮೇಲ್‌ ಕಳುಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಹಲವರು ಕಮೆಂಟ್ ಮಾಡಿದ್ದಾರೆ. 99 ಮಂದಿ ಮೀಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದರೆ ಮೀಟಿಂಗ್ ಇದೆ ಎನ್ನುವ ಸಂದೇಶವೇ ಸರಿಯಾಗಿ ತಲುಪಿಲ್ಲ ಎಂದು ಕಾಣುತ್ತದೆ ಅಥವಾ ಮೀಟಿಂಗ್‌ನಲ್ಲಿ ಪ್ರಮುಖ ವಿಷಯಗಳ ಚರ್ಚೆ ಇರುವುದಿಲ್ಲ ಎಂದು ತುಂಬಾ ಮಂದಿ ಕಾಮೆಂಟ್ ಮಾಡಿದ್ದಾರೆ. ಇನ್ನು ಒಂದಷ್ಟು ಉದ್ಯೋಗಿಗಳು ತಮ್ಮ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಮೀಟಿಂಗ್‌ನಲ್ಲಿ ಭಾಗಿಯಾಗದ ಕಾರಣಕ್ಕೆ ಬಾಸ್ ಕ್ಲಾಸ್ ತೆಗೆದುಕೊಂಡ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಉದ್ಯೋಗಿಗಳು ಮೀಟಿಂಗ್‌ನಲ್ಲಿ ಗಂಭೀರವಾಗಿ ಪಾಲ್ಗೊಳ್ಳಬೇಕಾಗಿತ್ತು. ಇದು ಉದ್ಯೋಗಿಗಳ ತಪ್ಪು, ಮೀಟಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂಬ ಕಾರಣಕ್ಕೇ ಉದ್ಯೋಗದಿಂದ ಅಮಾನತುಗೊಳಿಸಿದ್ದು ಬಾಸ್ ತಪ್ಪು, ಬಾಸ್‌ಗೆ ಮಾನವೀಯತೆ ಇಲ್ಲ ಎಂದೆಲ್ಲ ಹಲವರು ಘಟನೆಯನ್ನು ವಿಶ್ಲೇಷಣೆ ಮಾಡಿದ್ದಾರೆ. ಈ ಘಟನೆ ಕುರಿತು ರೆಡ್ಡಿಟ್‌ ಬಳಕೆದಾರರು ಕೂಡ ಮಾತನಾಡಿದ್ದಾರೆ. ಕಂಪನಿಗೆ ಇಂಟರ್ನ್‌ ಆಗಿ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ ಅಮಾನತುಗೊಂಡಿರುವುದಕ್ಕೆ ಅವರು ತೀವ್ರ ಬೇಸರ ವ್ಯಕ್ತಪಡಿಸಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Gold Watch: 700 ಟೈಟಾನಿಕ್ ಪ್ರಯಾಣಿಕರನ್ನು ರಕ್ಷಿಸಿದ ಕ್ಯಾಪ್ಟನ್‍ಗೆ ನೀಡಿದ್ದ ಚಿನ್ನದ ವಾಚ್‌ ದಾಖಲೆ ಮೊತ್ತಕ್ಕೆ ಹರಾಜು!