ಬುಚರೆಸ್ಟ್: ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ರೊಮೇನಿಯಾದ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ ಸಂಭವಿ ಸಿದ ಭೀಕರ ಅಗ್ನಿ ದುರಂತದಲ್ಲಿ 12 ರೋಗಿಗಳು ದುರ್ಮರಣಕ್ಕೀಡಾಗಿದ್ದಾರೆ. ವೈದ್ಯರು ಸೇರಿದಂತೆ ಎಂಟು ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.
ರೊಮೇನಿಯಾದ ಬುಚರೆಸ್ಟ್ ನಗರದ ಸಮೀಪ ಇರುವ ಪಿಯಾಟ್ರಾ ನಿಮ್ಟ್ ಕೌಂಟಿ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಅಕ್ಕಪಕ್ಕದ ಕೊಠಡಿಗಳಿಗೆ ವ್ಯಾಪಿಸಿತು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಲಾಸಿ ನಗರದ ಕೋವಿಡ್-19 ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ರೊಮೇನಿಯಾ ಆರೋಗ್ಯ ಸಚಿವ ನೆಲು ಟಟಾರು ತಿಳಿಸಿದ್ದಾರೆ.
ರೊಮೇನಿಯಾದಲ್ಲಿ 2015ರ ನಂತರ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕ ಇದಾಗಿದೆ. ಐದು ವರ್ಷಗಳ ಹಿಂದೆ ಬುಚರೆಸ್ಟ್ ನಗರದ ನೈಟ್ ಕ್ಲಬ್‍ನಲ್ಲಿ ಬೆಂಕಿ ದುರಂತ ಸಂಭವಿಸಿ 65ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.