Friday, 22nd November 2024

Crime News: ಶಿಸ್ತು ಕಲಿಸಲು 10 ವರ್ಷದ ಮಗಳಿಗೆ ಭೀಕರವಾಗಿ ಥಳಿಸಿ ಕೊಂದೇ ಬಿಟ್ಟ ಪಾಪಿ ತಂದೆ

Crime News

ಲಂಡನ್‌: ಆಕೆ 10 ವರ್ಷದ ಮುದ್ದಾದ ಬಾಲಕಿ. ಮನೆ ತುಂಬ ಓಡಾಡಿಕೊಂಡಿದ್ದ ಹಾಲುಗೆನ್ನೆಯ ಈ ಹುಡುಗಿ ಇದ್ದಕ್ಕಿದ್ದಂತೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣ ನಡೆದು ಸುಮಾರು 1 ವರ್ಷದ ಬಳಿಕ ಆಕೆಯ ಕೊಲೆ ರಹಸ್ಯ ಬಯಲಾಗಿದೆ. ತಾನೇ ಕೊಲೆ ಮಾಡಿರುವುದಾಗಿ ಆಕೆಯ ತಂದೆ ಒಪ್ಪಿಕೊಂಡಿದ್ದಾನೆ. ಮೃತಳನ್ನು ಬ್ರಿಟಿಷ್‌-ಪಾಕಿಸ್ತಾನಿ ಬಾಲಕಿ 10 ವರ್ಷದ ಸಾರಾ ಶರೀಫ್‌ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಉರ್ಫಾನ್‌ ಶರೀಫ್‌ (42) ಕೊಲೆ ಆರೋಪಿ. ಇಂಗ್ಲೆಂಡ್‌ನಲ್ಲಿ ಈ ಪ್ರಕರಣ ನಡೆದಿದ್ದು, ಸದ್ಯ ಭಾರಿ ಸದ್ದು ಮಾಡುತ್ತಿದೆ (Crime News).

2023ರ ಆಗಸ್ಟ್‌ 10ರಂದು ಲಂಡನ್‌ನ ನೈಋತ್ಯ ಭಾಗದಲ್ಲಿರುವ ವೋಕಿಂಗ್‌ನ ತಮ್ಮ ಮನೆಯ ಹಾಸಿಗೆಯಲ್ಲಿ ಸಾರಾ ಶರೀಫ್‌ನ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಮನೆಯವರು ನಾಪತ್ತೆಯಾಗಿದ್ದರು. ಆಕೆಯ ಶರೀರದ ತುಂಬ ಸುಟ್ಟ, ಕಚ್ಚಿದ ಗಾಯಗಳಿದ್ದವು ಮತ್ತು ಕನಿಷ್ಠ 25 ಮೂಳೆ ಮುರಿತಕ್ಕೊಳಗಾಗಿದ್ದವು. ಇಷ್ಟು ಕ್ರೂರವಾಗಿ ಕೊಲೆಯಾಗಿದ್ದ ಬಾಲಕಿಯನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡು ತಳಿಖೆ ಆರಂಭಿಸಿದ್ದರು. ಇದೀಗ ಕೊಲೆ ರಹಸ್ಯ ಬಯಲಾಗಿದ್ದು, ಮಗಳನ್ನು ಕೊಂದಿರುವುದಾಗಿ ಉರ್ಫಾನ್‌ ಶರೀಫ್‌ ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದಿಂದ ಲಂಡನ್‌ಗೆ ಹಿಂದಿರುಗಿದ ಆತನನ್ನು ಬಂಧಿಸಲಾಗಿದೆ.

ಘಟನೆ ವಿವರ

ಉರ್ಫಾನ್‌ ಶರೀಫ್‌ ಬಲವಾಗಿ ಥಳಿಸಿದ್ದರಿಂದ ಸಾರಾ ಮೃತಪಟ್ಟಿದ್ದಳು. ಅದಾಗ್ಯೂ ತನಗೆ ಮಗಳನ್ನು ನೋಯಿಸುವ ಉದ್ದೇಶವಿರಲಿಲ್ಲ ಎಂದು ಆತ ತಿಳಿಸಿದ್ದಾನೆ. ಆಕೆಯ ಮೃತದೇಹ ಪತ್ತೆಯಾಗುವ ಮುನ್ನ ಉರ್ಫಾನ್ ಶರೀಫ್ ತನ್ನ ಪತ್ನಿ ಬೀನಾಶ್ ಬಟೂಲ್ (30) ಮತ್ತು ಬಾಲಕಿಯ ಚಿಕ್ಕಪ್ಪ ಫೈಸಲ್ ಮಲಿಕ್ (29)ನೊಂದಿಗೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಸದ್ಯ ಆತನನ್ನು ಇಂಗ್ಲೆಂಡ್‌ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಘಾತಕಾರಿ ವಿವರಗಳು ಬಹಿರಂಗಗೊಂಡಿವೆ.

ಮಗಳ ಮೇಲೆ ನಿರಂತರ ಹಲ್ಲೆ

ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಉರ್ಫಾನ್ ಶರೀಫ್‌ ವಹಿಸಿಕೊಂಡಿದ್ದಾನೆ. ಸಾರಾಳ ದೇಹದ ಮೇಲೆ 71 ಗಾಯಗಳು ಕಂಡು ಬಂದಿದ್ದು, ಮೂಳೆ ಮುರಿತಕ್ಕೊಳಗಾಗಿದೆ. ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ ಉರ್ಫಾನ್ ಶರೀಫ್‌ ಬಳಿಕ ಬ್ರಿಟಿಷ್‌ ಪೊಲೀಸರು ಕರೆ ಮಾಡಿ ಮಗಳನ್ನು ತುಂಬ ಥಳಿಸಿದ್ದೇನೆ ಎಂದು ತಿಳಿಸಿದ್ದ. ಪೊಲೀಸರು ಮನೆಗೆ ತಲುಪಿ ನೋಡಿದಾಗ ಬಾಲಕಿಯ ಶವದ ಜತೆಗೆ ಉರ್ಫಾನ್ ಶರೀಫ್‌ ಬರೆದ ಟಿಪ್ಪಣಿಯೂ ಸಿಕ್ಕಿತ್ತು. ಅದರಲ್ಲಿ ಆತ “ಅವಳನ್ನು ಕೊಲ್ಲುವುದು ನನ್ನ ಉದ್ದೇಶವಾಗಿರಿಲ್ಲ ಎಂದು ನಾನು ಪ್ರಮಾಣ ಮಾಡುತ್ತೇನೆ. ಆದರೆ ನಾನು ನಿಯಂತ್ರಣ ಕಳೆದುಕೊಂಡೆʼʼ ಎಂದು ಬರೆದಿದ್ದ.

ಇದೀಗ ತನಿಖೆ ವೇಳೆ ಬಾಲಕಿಯ ಮೇಲೆ ಆತ ನಿರಂತವಾಗಿ ನಡೆಸುತ್ತಿದ್ದ ಹಲ್ಲೆಯ ಸಂಗತಿ ಬಹಿರಂಗಗೊಂಡಿದೆ. ಬ್ಯಾಟ್‌ನಿಂದ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾನೆ. ಸಾರಾ ವಾಂತಿ ಮಾಡಿಕೊಳ್ಳುತ್ತಿದ್ದರಿಂದ ಕುಪಿತನಾಗಿ ಆತ ಅವಳನ್ನು ಥಳಿಸುತ್ತಿದ್ದ. ಉರ್ಫಾನ್ ಶರೀಫ್‌ ಹಲ್ಲೆ ನಡೆಸಿದ್ದರಿಂದ ಸಾರಾಳ ಮುಖದ ಮೇಲೆ ಗಾಯವಾಗಿತ್ತು. ಈ ಕಾರಣಕ್ಕೆ ಆಕೆ ಕೆಲವು ದಿನಗಳಿಂದ ಶಾಲೆಗೂ ಹೋಗುತ್ತಿರಲಿಲ್ಲ. ತನ್ನ ಕೃತ್ಯವನ್ನು ಮರೆ ಮಾಚಲು ಮನೆ ಪಾಠಕ್ಕೆ ಶಿಕ್ಷಕರನ್ನೂ ಗೊತ್ತು ಮಾಡಿದ್ದ. ಕೊನೆಗೊಂದು ದಿನ ಹಿಂಸೆ ತಾಳಲಾರದೆ ಆಕೆ ಅಸು ನೀಗಿದ್ದಳು.

ಮಗಳ ದೇಹದ ಮೇಲೆ ಕಂಡು ಬಂದ ಗಾಯ ಕ್ರಿಕೆಟ್ ಬ್ಯಾಟ್ ಬಳಸಿ ಹಲ್ಲೆ ನಡೆಸಿದ್ದರಿಂದ ಉಂಟಾಗಿದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಆದರೆ ಆಕೆಗೆ ಎಂದಿಗೂ ಕಚ್ಚಲಿಲ್ಲ ಅಥವಾ ಕುತ್ತಿಗೆಗೆ ಹೊಡೆದಿಲ್ಲ ಎಂದು ತಿಳಿಸಿದ್ದಾನೆ. ತಾನು ಸಾರಾಳನ್ನು ಕೊಲ್ಲುವ ಉದ್ದೇಶ ಹೊಂದಿರಲಿಲ್ಲ. ಬದಲಾಗಿ ಶಿಸ್ತು ಕಲಿಸಲು ಆಕೆಗೆ ಹೊಡೆಯುತ್ತಿದ್ದುದಾಗಿ ಸಮರ್ಥಿಸಿಕೊಂಡಿದ್ದಾನೆ. ಇದೀಗ ಆತನ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Russian Chef: ಪುಟಿನ್‌ ವಿರುದ್ಧ ಪೋಸ್ಟ್‌ ಮಾಡಿದ್ದ ರಷ್ಯಾದ ಶೆಫ್‌ ಶವವಾಗಿ ಪತ್ತೆ; ಈ ಸಾವಿನ ಹಿಂದೆ ಇದ್ಯಾ ರಣಭೀಕರ ಮಿಸ್ಟ್ರಿ?