Sunday, 15th December 2024

ಶ್ರೀಲಂಕಾದಲ್ಲಿ ಕರ್ಫ್ಯೂ ತೆರವು

ಕೊಲಂಬೋ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಇನ್ನೂ ರಾಜೀನಾಮೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜು.13ರಂದು ರಾಜೀನಾಮೆ ನೀಡುವುದಾಗಿ ಗೊಟಬಯ ಘೋಷಿಸಿದ್ದರು. ಬುಧವಾರ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು. ಭದ್ರತಾ ದೃಷ್ಟಿಯಿಂದ ಗೊಟಬಯ ಮಾಲ್ಡೀವ್ಸ್ ಬಿಟ್ಟು ಸಿಂಗ ಪುರಕ್ಕೆ ತೆರಳಲಿದ್ದು, ಆ ನಂತರ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.

ದೇಶ ತೊರೆಯುವ ಮೊದಲು ಅಧ್ಯಕ್ಷ ಗೊಟಬಯ ಅವರು, ರಾನಿಲ್ ವಿಕ್ರಮ ಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ರಾಜೀನಾಮೆಗೆ ತೀವ್ರ ಒತ್ತಡದ ನಡುವೆ ಸೂಕ್ತ ವ್ಯಕ್ತಿಯನ್ನು ಪ್ರಧಾನಿ ಸ್ಥಾನಕ್ಕೆ ನಿರ್ದೇಶನ ಮಾಡುವಂತೆ ಸ್ಪೀಕರ್ ಮಹಿಂದಾ ಯಪಾ ಅಬೆವರ್ಧನ ಅವರಿಗೆ ಪ್ರಧಾನಿ ರಾನಿಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಲಂಕಾ ಅಧ್ಯಕ್ಷ ಹಾಗೂ ಪ್ರಧಾನಿ ರಾಜೀನಾಮೆ ಗೆ ಪಟ್ಟು ಹಿಡಿದಿದ್ದಾರೆ. ದೇಶದೆಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ರಾಜಪಕ್ಸ ದೇಶದಿಂದ ಪಲಾಯನ ಮಾಡಿದ ನಂತರ ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 84 ಮಂದಿ ಗಾಯ ಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.