ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಸಂಸದ ಡಾ.ಅಮಿ ಬೆರಾ ಅವರು ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ಸಂಸತ್ತಿನ ಈ ಉಪಸಮಿತಿ ಏಷ್ಯಾ, ಫೆಸಿಫಿಕ್ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳು ಮತ್ತು ಅಣ್ವಸ್ತ್ರ ಪ್ರಸರಣ ತಡೆ ಕುರಿತ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಅಮೆರಿಕದ ಸಂಸತ್ತಿನ ಕೆಳಮನೆಯಲ್ಲಿ (ಜನಪ್ರತಿನಿಧಿಗಳ ಸಭೆ) ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ 55 ವರ್ಷದ ಇಂಡಿ ಯನ್ ಅಮೆರಿಕನ್ ಬೆರಾ, ಈಗ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪ ಸಮಿತಿಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
‘ಏಷ್ಯಾ, ಪೆಸಿಫಿಕ್, ಮಧ್ಯ ಏಷ್ಯಾ ಮತ್ತುಅಣ್ವಸ್ತ್ರ ಪ್ರಸರಣ ತಡೆ ನೀತಿಗಳ ರೂಪಿಸುವ ಕುರಿತಾದ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಉಪಸಮಿತಿಗೆ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿರುವುದು ನನಗೆ ಸಿಕ್ಕಿರುವ ಗೌರವ. ನಮ್ಮ ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಯು ಈ ಪ್ರದೇಶದೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿರುವುದರಿಂದ ಏಷ್ಯಾವು ಅಮೆರಿಕದ ವಿದೇಶಾಂಗ ನೀತಿಗೆ ಅತ್ಯಂತ ಮಹತ್ವದ ಪ್ರದೇಶವಾಗಿ ಮುಂದುವರೆದಿದೆ’ ಎಂದು ಬೆರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.