Thursday, 12th December 2024

ಸಿಂಗಾಪುರಕ್ಕೆ ಬಂದಿಳಿದು ರಾಜೀನಾಮೆ ನೀಡಿದ ಗೋಟಬಯ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನ ಮಾಡಿ ಸಿಂಗಾಪುರಕ್ಕೆ ಬಂದಿಳಿದ ನಂತರ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ್ದಾರೆ ಎಂದು ಕೇಳಿ ಕೊಲಂಬೊದಲ್ಲಿ ಜನರು ಪಟಾಕಿ ಸಿಡಿಸಿದರು. ರಾಜೀನಾಮೆ ಪತ್ರ ಸಿಕ್ಕಿರುವುದನ್ನು ಸಂಸತ್ತಿನ ಸ್ಪೀಕರ್ ಖಚಿತಪಡಿಸಿದ್ದಾರೆ.

ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸೆಕ್ರೆಟರಿಯೇಟ್ ಮತ್ತು ಪ್ರಧಾನಿ ಕಚೇರಿ ಸೇರಿದಂತೆ ಅಧಿಕೃತ ಕಟ್ಟಡಗಳನ್ನು ವಶಪಡಿಸಿ ಕೊಳ್ಳುವುದನ್ನು ಕೊನೆ ಗೊಳಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ ದಿನವೇ ಅಧ್ಯಕ್ಷ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.

ಗೋಟಬಯ ರಾಜಪಕ್ಸ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ಬಂಧನದಿಂದ ವಿನಾಯಿತಿ ಸಿಗುತ್ತದೆ, ಆದ್ದರಿಂದ ಶ್ರೀಲಂಕಾವನ್ನು ತೊರೆದು ಹೋದ ನಂತ ರವೇ ರಾಜೀನಾಮೆ ನೀಡಿದ್ದಾರೆ. ಇದರಿಂದ ಬಂಧನದ ಭೀತಿಯನ್ನು ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ ಶ್ರೀಲಂಕಾದಲ್ಲಿ ಇದ್ದು ರಾಜೀನಾಮೆ ನೀಡಿದ್ದರೆ ಬಂಧಿಸುವ ಸಾಧ್ಯತೆ ಕೂಡ ಇರುತ್ತಿತ್ತು.

ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ, ಪರಿಸ್ಥಿತಿ ನಿಯಂತ್ರಿಸಲು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.