Monday, 14th October 2024

ಗ್ರೀಕ್ ಸಾರ್ವತ್ರಿಕ ಚುನಾವಣೆ: ಕನ್ಸರ್‌ವೇಟಿವ್‌ ನ್ಯೂ ಡೆಮಾಕ್ರಸಿ ಪಕ್ಷಕ್ಕೆ ಜಯ

ಅಥೆನ್ಸ್: ಗ್ರೀಕ್‌ನಲ್ಲಿ ಕನ್ಸರ್‌ವೇಟಿವ್‌ ನ್ಯೂ ಡೆಮಾಕ್ರಸಿ ಪಕ್ಷವು ಭರ್ಜರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ.

2 ತಿಂಗಳ ಒಳಗಾಗಿ 2ನೇ ಬಾರಿಗೆ ಭಾನುವಾರ ಸಾರ್ವತ್ರಿಕ ಚುನಾವಣೆ ಮತದಾನ ನಡೆದಿತ್ತು.

ಕನ್ಸರ್‌ವೇಟಿವ್‌ ನ್ಯೂ ಡೆಮಾಕ್ರಸಿ ಪಕ್ಷವು ಶೇ 40.5ರಷ್ಟು ಮತಗಳನ್ನು ಪಡೆದಕೊಂಡಿದೆ. ಅವರ ಪ್ರತಿಸ್ಪರ್ಧಿ ಎಡಪಂಥೀಯ ಸಿರಿಜಾ ಪಕ್ಷವನ್ನು ಶೇ 18ಕ್ಕೆ ತಲುಪಲು ಸಹ ಹೆಣಗಾಡಿದೆ. ಇದು ಮೇ ತಿಂಗಳ ಕೊನೆಯಲ್ಲಿ ನಡೆದ ಚುನಾವಣೆಗಳಿಗಿಂತ ಶೇ 2 ರಷ್ಟು ಕಡಿಮೆಯಾಗಿದೆ.

ಗ್ರೀಸ್‌ನ ಕನ್ಸರ್‌ವೇಟಿವ್‌ ನ್ಯೂ ಡೆಮಾಕ್ರಸಿ ಪಕ್ಷದ ನಾಯಕ ಹಾಗೂ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿರುವ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಚುನಾವಣೆ ಯಲ್ಲಿ ಜಯಗಳಿಸಿದ ಬಳಿಕ ಆರ್ಥಿಕ ಸುಧಾರಣೆಗಳನ್ನು ವೇಗಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಅಭಿವೃದ್ಧಿಯ ಕೆಲಸಗಳಿಗೆ ಮತ್ತಷ್ಟು ವೇಗ ನೀಡಲು ಬದ್ಧವಾಗಿದ್ದೇವೆ ಎಂದು ಘೋಷಿಸಿದ್ದಾರೆ.

‘ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಅಸಮಾನತೆ ಕಡಿಮೆ ಮಾಡುವತ್ತ ಗಮನ ಹರಿಸಲಿದ್ದೇವೆ. ಜನತೆಗೆ ಉತ್ತಮ ಮತ್ತು ಉಚಿತ ಸಾರ್ವಜನಿಕ ಆರೋಗ್ಯ ಸೇವೆ ನೀಡುವ ಜೊತೆಗೆ ಮತ್ತು ಪ್ರಬಲ ದೇಶಗಳೊಂದಿಗೆ ಕೈಜೋಡಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದೇವೆ’ ಎಂದರು.

ಸಂಸತ್ತಿನ 300 ಸ್ಥಾನಗಳಲ್ಲಿ 158 ಸ್ಥಾನಗಳನ್ನು ಮಿಟ್ಸೊಟಾಕಿಸ್ ಪಕ್ಷವು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಬಹುದೊಡ್ಡ ಅಂತರದಿಂದ ಗೆದ್ದಿದ್ದ ಕನ್ಸರ್‌ವೇಟಿವ್‌ ಪಕ್ಷವು ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಮೇ ನಲ್ಲಿ ಶೇ 61ರಷ್ಟು ಮತದಾನ ನಡೆದಿತ್ತು. ಆದರೆ, ಭಾನುವಾರ ಕೇವಲ 53 ಕ್ಕಿಂತ ಕಡಿಮೆ ಮತದಾನವಾಗಿದೆ.