Wednesday, 4th December 2024

Guinea Violence: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ರೇಕ್ಷಕರು…ಭಾರೀ ಘರ್ಷಣೆ; 100ಕ್ಕೂ ಹೆಚ್ಚು ಜನರ ಮಾರಣಹೋಮ

Viral Video

ಕೊನಕ್ರಿ : ಎಲ್ಲಿ ನೋಡಿದರೂ ಹೆಣಗಳ ಸಾಲು, ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಕಣ್ಣೀರು, ಇವೆಲ್ಲವೂ ಕಂಡು ಬಂದಿದ್ದು ಗಿನಿಯಾ (Guinea Violence) ದೇಶದ ಜೆರೆಕೋರ್‌ನಲ್ಲಿ. ಫುಟ್‌ಬಾಲ್‌ ಪಂದ್ಯಾವಳಿ (Guinea Football Match) ನೋಡಲು ಹೋದವರು ಹೆಣವಾಗಿ ಮಲಗಿದ್ದಾರೆ. ಭಾನುವಾರ ನಡೆದ ಪಂದ್ಯದ ಸಮಯದಲ್ಲಿ ಪ್ರೇಕ್ಷಕರ ನಡುವೆ ಏರ್ಪಟ್ಟ ಘರ್ಷಣೆಯ ಪರಿಣಾಮವಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ(Viral Video).

ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಫುಟ್ಬಾಲ್‌ ಮೈದಾನದ ಹೊರಗಡೆ ನಡೆಯುತ್ತಿರುವ ಗಲಾಟೆ ದೃಶ್ಯಗಳನ್ನು ಕಾಣಬಹುದಾಗಿದೆ. ಆಕ್ರೋಶಗೊಂಡ ಗುಂಪುಗಳು ಸ್ಥಳೀಯ ಪೊಲೀಸ್‌ ಠಾಣೆಗೆ ನುಗ್ಗಿ ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘರ್ಷಣೆಗೆ ಆಂಪೈರ್‌ ನೀಡಿದ ತಪ್ಪು ನಿರ್ಣಯ ಎಂದು ಹೇಳಲಾದರೂ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಆಂಪೈರ್‌ ವಿವಾದಾತ್ಮಕ ತೀರ್ಪು ನೀಡುತ್ತಿದ್ದಂತೆ ಗುಂಪು ಮೈದಾನಕ್ಕೆ ನುಗ್ಗಿ ಗಲಾಟೆ ಪ್ರಾರಂಭ ಮಾಡಿತ್ತು ಎಂದು ತಿಳಿದು ಬಂದಿದೆ.

2021 ರಲ್ಲಿ ಗಿನಿಯಾದಲ್ಲಿ ನಡೆದ ದಂಗೆಯ ನಂತರ ಅಧಿಕಾರವನ್ನು ವಶಪಡಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿಯ ಭಾಗವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮೊದಲು ಗಿನಿಯಾದ ಸೇನೆಯಲ್ಲಿದ್ದ ಮಮಡಿ ಡೌಂಬೌಯಾ 2021 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಆಲ್ಫಾ ಕಾಂಡೆ ಅವರನ್ನು ಪದಚ್ಯುತಿಗೊಳಿಸುವ ಮೂಲಕ ಅಧಿಕಾರಕ್ಕೇರಿದ್ದರು. ಸದ್ಯ ಡೌಂಬೌಯಾ ಆಡಳಿತದಲ್ಲಿ ಗಿನಿಯಾದಲ್ಲಿ ಉದ್ವಿಗ್ವತೆ ಹೆಚ್ಚಿದ್ದು, 2025 ರ ವೇಳೆಗೆ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂದು ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Football Stadium : ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿವೆ 19 ಫುಟ್ಬಾಲ್‌ ಸ್ಟೇಡಿಯಮ್‌ಗಳು