Saturday, 23rd November 2024

Harini Amarasuriya: ಶ್ರೀಲಂಕಾ ನೂತನ ಪ್ರಧಾನಿ ಹರಿಣಿ ಅಮರಸೂರ್ಯಗಿದೆ ಭಾರತದ ನಂಟು! ಏನಿವರ ಹಿನ್ನೆಲೆ?

Harini Amarasuriya

ಕೊಲಂಬೊ: ಎಡಪಂಥೀಯ ನಾಯಕ ಅನುರಾ ಕುಮಾರಾ ದಿಸ್ಸಾನಾಯಕೆ (Anura Kumara Dissanayake) ಶ್ರೀಲಂಕಾದ ನೂತನ ಅಧ್ಯಕ್ಷರಾಗಿ (Srilanka President) ಆಯ್ಕೆಯಾದ ಬಳಿಕ ಹಲವು ಮಹತ್ವದ ಬೆಳವಣಿಗೆಗಳು ನಡೆದಿದೆ. ಸೆಪ್ಟೆಂಬರ್‌ 24ರಂದು ಸಂಸತ್ತನ್ನು ವಿಸರ್ಜಿಸಿರುವ ಅವರು ದೇಶದ ಮುಂದಿನ ಪ್ರಧಾನಿಯಾಗಿ (Sri Lanka PM) ಹರಿಣಿ ಅಮರಸೂರ್ಯ (Harini Amarasuriya) ಅವರನ್ನು ನೇಮಕ ಮಾಡಿದ್ದಾರೆ.

ನವೆಂಬರ್ 14ರಂದು ನಡೆಯುವ ಸಂಸತ್ತಿನ ಚುನಾವಣೆಯವರೆಗೆ ನಾಲ್ಕು ಸದಸ್ಯರ ಕ್ಯಾಬಿನೆಟ್‌ನ ಭಾಗವಾಗಿ ಹೊಸ ಪ್ರಧಾನಿಯನ್ನು ನೇಮಕ ಮಾಡಲಾಗಿದೆ. ಮಂಗಳವಾರ ತಡವಾಗಿ ಹೊರಡಿಸಲಾದ ಗೆಜೆಟ್ ಮೂಲಕ ಸಾರ್ವತ್ರಿಕ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗಿದೆ. 54 ವರ್ಷದ ಸಂಸದೆ ಹರಿಣಿ ಅಮರಸೂರ್ಯ ಅವರು ಮಂಗಳವಾರ ಶ್ರೀಲಂಕಾದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೊತೆಗೆ ಇವರು ನ್ಯಾಯಾಂಗ, ಶಿಕ್ಷಣ, ಆರೋಗ್ಯ, ಮಹಿಳಾ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆಗಳನ್ನು ನಿರ್ವಹಿಸಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿರುವ ಹರಿಣಿ ಅಮರಸೂರ್ಯ ಲಿಂಗ ಸಮಾನತೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

Harini Amarasuriya

ಭಾರತದಲ್ಲಿ ಅಧ್ಯಯನ ಮಾಡಿದ್ದ ಹರಿಣಿ

ದೆಹಲಿಯ ಹಿಂದೂ ಕಾಲೇಜ್ ಆಫ್ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿರುವ ಹರಿಣಿ ಅಮರಸೂರ್ಯ ಅವರು ಆಸ್ಟ್ರೇಲಿಯಾದಲ್ಲಿ ಅನ್ವಯಿಕ ಮಾನವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ ತಾಯ್ನಾಡಿಗೆ ಮರಳಿದ ಅವರು ಅಂತಾರಾಷ್ಟ್ರೀಯ ಮಾನವೀಯ ಮತ್ತು ಅಭಿವೃದ್ಧಿ ವಲಯದಲ್ಲಿ ಕೆಲಸ ಮಾಡಿದ್ದಾರೆ.

ಹರಿಣಿ ಅಮರಸೂರ್ಯ ಅವರು 1991 ಮತ್ತು 1994ರ ನಡುವೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ದಿ ಹಿಂದೂ ಕಾಲೇಜ್‌ ಆಫ್‌ ಯುನಿವರ್ಸಿಟಿ ಭಾರತದ ಪ್ರತಿಷ್ಠಿತ ಕಾಲೇಜಾಗಿದ್ದು, ರಾಜಕೀಯ, ಕಲೆ ಮತ್ತು ಶಿಕ್ಷಣದಲ್ಲಿ ಖ್ಯಾತಿಯನ್ನು ಪಡೆದಿದೆ. ಹರಿಣಿ ಅವರ ರಾಜಕೀಯ ವೃತ್ತಿಜೀವನವನ್ನು ರೂಪಿಸುವಲ್ಲಿ ಹಿಂದೂ ಕಾಲೇಜಿನಲ್ಲಿ ಅವರು ಕಳೆದ ಸಮಯವು ಪ್ರಮುಖ ಪಾತ್ರವನ್ನು ವಹಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಕಾಲೇಜಿನ ಪ್ರಾಂಶುಪಾಲರಾದ ಅಂಜು ಶ್ರೀವಾಸ್ತವ, ಹಿಂದೂ ಧರ್ಮೀಯರೊಬ್ಬರು ಶ್ರೀಲಂಕಾದ ಪ್ರಧಾನಿಯಾಗಿದ್ದಾರೆ ಎಂದು ತಿಳಿದು ಹೆಮ್ಮೆಯಾಗಿದೆ. ಹರಿಣಿ ಅವರ ಸಾಧನೆಗಳ ಬಗ್ಗೆ ನಾವು ತುಂಬಾ ಹೆಮ್ಮೆ ಪಡುತ್ತೇವೆ. ಅವರ ಯಶಸ್ಸಿನ ಹಾದಿಯನ್ನು ರೂಪಿಸುವಲ್ಲಿ ಹಿಂದೂ ಕಾಲೇಜಿನಲ್ಲಿ ಅವರು ಕಳೆದ ಸಮಯವು ಒಂದು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಹಿಂದೂ ಕಾಲೇಜು ವಿದ್ಯಾರ್ಥಿ ಸಂಘಟನೆ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ. ಹರಿಣಿ ಅವರ ನೇಮಕವು ನಮ್ಮ ಕಾಲೇಜಿನ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಎಂದು ಅವರು ತಿಳಿಸಿದರು. ಬಾಲಿವುಡ್ ನಿರ್ದೇಶಕ ನಳಿನ್ ರಾಜನ್ ಸಿಂಗ್ ಮತ್ತು ಹರಿಣಿ ಅಮರಸೂರ್ಯ ಅವರ ಒಂದೇ ತರಗತಿಯಲ್ಲಿದ್ದರು. ಹರಿಣಿ ಕಾಲೇಜು ಉತ್ಸವಗಳು ಮತ್ತು ಚರ್ಚೆಗಳಲ್ಲಿ ತುಂಬಾ ತೊಡಗಿಸಿಕೊಂಡಿಕೊಂಡಿದ್ದರು. 90ರ ದಶಕದ ಸಾಕಷ್ಟು ಮಂದಿ ನಮ್ಮಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಸಿಂಗ್‌ ಅವರು ನೆನಪಿಸಿಕೊಂಡರು.

ಹರಿಣಿ ಅಮರಸೂರ್ಯ ಅವರು ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಮಾನವಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಕುಟುಂಬದಲ್ಲಿ ಕಿರಿಯ ಮಗಳಾದ ಹರಿಣಿ ಅವರು ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ಬೆಳೆದವರು. ಚಹಾ ತೋಟಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಾಗ ಕೊಲಂಬೊಗೆ ತೆರಳಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

Harini Amarasuriya

ರಾಜಕೀಯ ಪ್ರವೇಶ

ಹರಿಣಿ ಅವರು ಉಪನ್ಯಾಸಕಿಯಾಗಿ ಕೆಲಸ ಪ್ರಾರಂಭಿಸಿದಾಗ ರಾಜಕೀಯಕ್ಕೆ ಪ್ರವೇಶಿಸಿದರು. 2011ರಲ್ಲಿ ರಾಜಪಕ್ಸೆ ಸರಕಾರ ಅಧಿಕಾರದಲ್ಲಿದ್ದಾಗ ಹರಿಣಿ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಸರಕಾರದ ವಿರುದ್ಧ ಪ್ರತಿಭಟಿಸಿದ್ದರು. 2015ರಲ್ಲಿ ಮೈತ್ರಿಪಾಲ ಸಿರಿಸೇನಾ ಸರಕಾರ ಅಧಿಕಾರಕ್ಕೆ ಬಂದಾಗ ʼಜನತಾ ವಿಮುಕ್ತಿ ಪೆರಮುನ್‌ʼನತ್ತ ಮುಖ ಮಾಡಿದರು.

ಅಧಿಕಾರ ಸ್ವೀಕರಿಸಿದ ಇತರ ಸಚಿವರು ಯಾರು?

ಹರಿಣಿ ಅವರೊಂದಿಗೆ ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹರಿಣಿ, ವಿಜಿತಾ ಮತ್ತು ಲಕ್ಷ್ಮಣ್ ಅವರು ಸಂಸತ್ತಿನ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶೀಘ್ರದಲ್ಲೇ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಬಳಿಕ ಪೂರ್ಣ ಪ್ರಮಾಣದ ಸಚಿವ ಸಂಪುಟದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಶ್ರೀಲಂಕಾದ ನೂತನ ಪ್ರಧಾನಿ

ಹರಿಣಿ ಅಮರಸೂರ್ಯ ಅವರು ಶ್ರೀಲಂಕಾದ 16ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2000ರಲ್ಲಿ ಸಿರಿಮಾವೋ ಬಂಡಾರನಾಯಕೆ ಅನಂತರ ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿ, ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆದು ಸ್ವಚ್ಛ ರಾಜಕೀಯ ಸಂಸ್ಕೃತಿಯನ್ನು ರೂಪಿಸುವುದಾಗಿ ಅಧ್ಯಕ್ಷ ದಿಸ್ಸಾನಾಯಕೆ ಭರವಸೆ ನೀಡಿದ್ದಾರೆ. ನಮ್ಮ ರಾಜಕೀಯವು ಸ್ವಚ್ಛವಾಗಿರಬೇಕು ಮತ್ತು ಜನರು ವಿಭಿನ್ನ ರಾಜಕೀಯ ಸಂಸ್ಕೃತಿಗೆ ಕರೆ ನೀಡಿದ್ದಾರೆ. ಆ ಬದಲಾವಣೆಗೆ ನಾನು ಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Anura Kumara Dissanayake: ಶ್ರೀಲಂಕಾ ಸಂಸತ್ತು ವಿಸರ್ಜಿಸಿದ ನೂತನ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ; ನವೆಂಬರ್‌ನಲ್ಲಿ ಚುನಾವಣೆ

ಪ್ರಸ್ತುತ ಶ್ರೀಲಂಕಾದ ರಾಜಕೀಯ ಚಟುವಟಿಕೆಗಳನ್ನು ವಿಶ್ವವೇ ಗಮನಿಸುತ್ತಿದೆ. ದಿಸ್ಸಾನಾಯಕೆ ಮತ್ತು ಅಮರಸೂರ್ಯ ಅವರ ಹೊಸ ನಾಯಕತ್ವ ಮತ್ತು ಅವರ ಮಧ್ಯಂತರ ಸರ್ಕಾರ ರಚನೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಶ್ರೀಲಂಕಾದಲ್ಲಿ ದುರ್ಬಲವಾಗಿರುವ ಆರ್ಥಿಕ ಚೇತರಿಕೆಯತ್ತ ಇವರು ಹೆಚ್ಚಿನ ಗಮನ ಕೊಡಬೇಕಿದೆ. ಇದಕ್ಕಾಗಿ ಇವರು ಯಾವ ರೀತಿಯ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.