Friday, 22nd November 2024

Hashem Safieddine: ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್‌

Hashem Safieddine

ಬೈರುತ್‌: ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹತನಾದ ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ(Hassan Nasrallah)ನ ಉತ್ತಾರಾಧಿಕಾರ ಎಂದೇ ಹೇಳಲಾಗುತ್ತಿದ್ದ ಮತ್ತೊರ್ವ ಹೆಜ್ಬುಲ್ಲಾ ಕಮಾಂಡರ್‌ ಹಶೆಂ ಸಫೀದ್ದೀನ್‌(Hashem Safieddine)ನನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ಬೈರುತ್‌ನಲ್ಲಿ ಸರಣಿ ವೈಮಾನಿಕ ದಾಳಿಯಲ್ಲಿ ಈತ ಹತನಾಗಿದ್ದನೆ ಎನ್ನಲಾಗಿದೆ. ಆದರೆ ಇಸ್ರೇಲ್‌ ಸೇನೆ ಇದನ್ನು ಇನ್ನು ಖಚಿತ ಪಡಿಸಿಲ್ಲ.

ಯಾರು ಈ ಹಶೆಂ ಸಫೀದ್ದೀನ್‌?

1960 ರ ದಶಕದ ಆರಂಭದಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಜನಿಸಿದ ಹಶೆಮ್ ಸಫೀದ್ದೀನ್‌ನನ್ನು ಹೆಜ್ಬುಲ್ಲಾದ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು 1980 ರ ದಶಕದಲ್ಲಿ ಲೆಬನಾನ್‌ನ ಅಂತರ್ಯುದ್ಧದ ಸಮಯದಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆಗೆ ಸೇರಿದ್ದ. ಅಲ್ಲದೇ ನಸ್ರಲ್ಲಾನ ಜತೆ ಜತೆಗೆ ಆತನಿಗೆ ಸರಿಸಮಾನನಾಗಿ ಬೆಳೆದು ನಿಂತಿದ್ದ.

ಶಿಯಾ ಧರ್ಮಗುರುವಿನ ಸ್ಥಾನಮಾನವನ್ನು ಸೂಚಿಸುವ ಕಪ್ಪು ಪೇಟವನ್ನು ಧರಿಸುವುದಕ್ಕೆ ಹೆಸರುವಾಸಿಯಾದ ಸಫೀದ್ದೀನ್ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ರಾಜಕೀಯ ಸೇರಿದಂತೆ ಹೆಜ್ಬುಲ್ಲಾದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾನೆ. 1995 ರಲ್ಲಿ, ಅವರು ಹೆಜ್ಬೊಲ್ಲಾದ ಅತ್ಯುನ್ನತ ಆಡಳಿತ ಮಂಡಳಿಯಾದ ಕನ್ಸಲ್ಟೇಟಿವ್ ಅಸೆಂಬ್ಲಿಗೆ ಏರಿದ ಈತ ಮಿಲಿಟರಿ ಚಟುವಟಿಕೆಗಳಿಗೆ ಜವಾಬ್ದಾರರಾಗಿರುವ ಜಿಹಾದಿ ಕೌನ್ಸಿಲ್‌ನ ಮುಖ್ಯಸ್ಥನಾಗಿದ್ದ. 1998 ರ ಹೊತ್ತಿಗೆ, ಅವರು ಪಕ್ಷದ ಕಾರ್ಯಕಾರಿ ಮಂಡಳಿಯನ್ನು ಮುನ್ನಡೆಸಲು ಆಯ್ಕೆಯಾದರು,

ಒಂದೇ ವಾರದಲ್ಲಿ 7 ಹೆಜ್ಬುಲ್ಲಾ ಕಮಾಂಡರ್‌ಗಳ ಹತ್ಯೆ

ಪೇಜರ್‌ ಸ್ಫೋಟದ ಮೂಲಕ ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾಗಳನ್ನು ಗುರಿಯಾಗಿಸಿ ದಾಳಿ ಆರಂಭಿಸಿದ ಇಸ್ರೇಲ್‌, ವೈಮಾನಿಕ ದಾಳಿಯನ್ನೂ ಶುರುಮಾಡಿತ್ತು. ಹೀಗೆ ಕಳೆದೊಂದು ವಾರದಲ್ಲಿ ಇಸ್ರೇಲ್‌ ಸೇನೆ ದಾಳಿಯಲ್ಲಿ ಕನಿಷ್ಠ ಏಳು ಹೆಜ್ಬುಲ್ಲಾ ಕಮಾಂಡರ್‌ಗಳನ್ನು ಹೊಡೆದುರುಳಿಸಲಾಗಿದೆ. ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಸಾವನ್ನಪ್ಪಿದ ಒಂದು ದಿನದ ನಂತರ, ಹೆಜ್ಬುಲ್ಲಾದ ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್‌ನ ಹತ್ಯೆಯನ್ನು ದೃಢಪಡಿಸಿತು. ದಾಳಿಯಲ್ಲಿ ಮತ್ತೊಬ್ಬ ಹಿರಿಯ ಕಮಾಂಡರ್ ಅಲಿ ಕರಕಿ ಸಾವನ್ನಪ್ಪಿದ್ದಾನೆ ಎಂದು ಗುಂಪು ಹೇಳಿದೆ. ದಾಳಿಯಲ್ಲಿ ಮಡಿದ ಇತರ ಹಿಜ್ಬುಲ್ಲಾ ಕಮಾಂಡರ್ಗಳೆಂದರೆ ಇಬ್ರಾಹಿಂ ಅಕಿಲ್, ಅಹ್ಮದ್ ವೆಹ್ಬೆ, ಮೊಹಮ್ಮದ್ ಸುರೂರ್ ಮತ್ತು ಇಬ್ರಾಹಿಂ ಕೊಬೈಸ್ಸಿ.

ಲೆಬನಾನ್‌ ರಾಜಧಾನಿ ಬೈರುತ್‌ನಲ್ಲಿ ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ನಸ್ರಲ್ಲಾನನ್ನು ಕೊಲ್ಲಲಾಗಿತ್ತು. ಇದು ಲೆಬನಾನಿನ ಉಗ್ರಗಾಮಿ ಸಂಘಟನೆಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿರುವ ನಸ್ರಲ್ಲಾ ಲೆಬನಾನಿನ ಉಗ್ರಗಾಮಿ ಸಂಘಟನೆಯ ಪರಮೋಚ್ಚ ನಾಯಕನಾಗಿದ್ದ. ಬೈರುತ್‌ನಲ್ಲಿ ಮೇಲೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾಹ್‌ನ ಪುತ್ರಿ ಝೈನಾಬ್ ಕೂಡ ಸಾವನ್ನಪ್ಪಿದ್ದಾಳೆ.

ಈ ಸುದ್ದಿಯನ್ನೂ ಓದಿ: Hassan Nasrallah: ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?