ರಿಯೊ ಗ್ರಾಂಡೆ ಡೊ ಸುಲ್: ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ವಿವಿಧ ಅನಾಹುತಗಳಲ್ಲಿ 37ಮಂದಿ ಮೃತಪಟ್ಟಿದ್ದಾರೆ.
ಮಳೆಗೆ ಕಟ್ಟಡಗಳು ಕುಸಿದಿದ್ದು, ರಸ್ತೆಗಳು ಜಲಾವೃತವಾಗಿವೆ. ಮಣ್ಣಿನ ಕುಸಿತದ ಪರಿಣಾಮ 37 ಮಂದಿ ಮೃತಪಟ್ಟಿದ್ದಾರೆ. 74 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಭಾರಿ ಮಳೆಗೆ ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕುಸಿದಿದ್ದು, ಇವುಗಳ ಅವಶೇಷದಡಿ ಸಿಲುಕಿರುವವರನ್ನು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪ್ರತಿಕ್ರಿಯೆ ನೀಡಿದ ಗವರ್ನರ್ ಲೀಟ್ ಅವರು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು 626 ಸೈನಿಕರೊಂದಿಗೆ 12 ವಿಮಾನಗಳು, 45 ವಾಹನಗಳು ಮತ್ತು 12 ದೋಣಿಗಳನ್ನು ನಿಯೋಜನೆ ಮಾಡಲಾಗಿದೆ.