Wednesday, 11th December 2024

Israel-Hamas Conflict: 6 ಮಂದಿ ಒತ್ತೆಯಾಳುಗಳ ಶವ ಪತ್ತೆಯಾದ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಭುಗಿಲೆದ್ದ ಆಕ್ರೋಶ

Israel-Hamas Conflict

ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷ(Israel-Hamas Conflict) ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ದಕ್ಷಿಣ ಗಾಜಾ ಪಟ್ಟಿಯಲ್ಲಿ ಹಮಾಸ್‌ ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ 6 ಮಂದಿ ಇಸ್ರೇಲ್‌ ಪ್ರಜೆಗಳ ಶವ ಪತ್ತೆಯಾಗಿದ್ದು, ಇಸ್ರೇಲ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ.  ಲಕ್ಷಾಂತರ ಪ್ರತಿಭಟನಾಕಾರರು ಭಾನುವಾರ ಬೀದಿಗಿಳಿದು, ಸೆರೆಯಾಳುಗಳನ್ನು ಬಿಡುಗಡೆ ಮಾಡಲು ದೇಶದ ನಾಯಕತ್ವದ ಅಸಮರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೆಲ್ ಅವೀವ್ (Tel Aviv)ನಲ್ಲಿ 3,00,000ಕ್ಕೂ ಅಧಿಕ ಮಂದಿ ಜಮಾಯಿಸಿದ್ದರೆ, ದೇಶದ ವಿವಿಧ ಭಾಗಗಳಲ್ಲಿ  2,00,000 ಅಧಿಕ ಮಂದಿ ಪ್ರತಿಭಟನೆ ನಡೆಸಿದರು.  ಇದು ಸುಮಾರು 18 ತಿಂಗಳಲ್ಲಿ ಅತಿದೊಡ್ಡ ರ‍್ಯಾಲಿ ಎನಿಸಿಕೊಂಡಿದೆ. ವೀಡಿಯೊದಲ್ಲಿ ಟೆಲ್ ಅವೀವ್‌ನ ಮುಖ್ಯ ಹೆದ್ದಾರಿ ಉದ್ದಕ್ಕೂ ಹತ್ಯೆಗೀಡಾದ ಒತ್ತೆಯಾಳುಗಳ ಚಿತ್ರಗಳೊಂದಿಗೆ, ಧ್ವಜಗಳನ್ನು ಹಿಡಿದ ಪ್ರತಿಭಟನಾಕಾರರು ತುಂಬಿರುವುದು ಕಂಡು ಬಂದಿದೆ. ಈ ಸಂಬಂಧ ಈಗಾಗಲೇ  29 ಮಂದಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದೇಶದ ಕಾರ್ಮಿಕ ಮುಖಂಡರು ಸೋಮವಾರ ಒಂದು ದಿನದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ.

https://x.com/wyattreed13/status/1830357321480114367

ಪ್ರತಿಭಟನಾಕಾರರು ಶನಿವಾರ ರಾತ್ರಿ ಪತ್ತೆಯಾದ ಶವಗಳ ಸಂಕೇತವಾಗಿ 6 ಸಾಂಕೇತಿಕ ಶವಪೆಟ್ಟಿಗೆಗಳನ್ನುಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು. ಹಮಾಸ್‌ ಉಗ್ರರು ಅಪಹರಿಸಿದ ಹರ್ಷ್ ಗೋಲ್ಡ್ ಬರ್ಗ್-ಪೋಲಿನ್ (23), ಈಡನ್ ಯೆರುಶಾಲ್ಮಿ (24), ಓರಿ ಡ್ಯಾನಿನೊ (25), ಅಲೆಕ್ಸ್ ಲೊಬನೊವ್ (32), ಕಾರ್ಮೆಲ್ ಗ್ಯಾಟ್ (40) ಮತ್ತು ಅಲ್ಮೋಗ್ ಸರೂಸಿ (27) ಅವರ ಶವಗಳು ಗಾಜಾದ ದಕ್ಷಿಣ ನಗರದ ರಾಫಾದ ಸುರಂಗದಲ್ಲಿ ಪತ್ತೆಯಾಗಿತ್ತು.

ವಿಧಿವಿಜ್ಞಾನ ಪರೀಕ್ಷೆಯು ಅವರನ್ನು 48-72 ಗಂಟೆಗಳ ಹಿಂದೆ ಹಮಾಸ್ ಭಯೋತ್ಪಾದಕರು ಹತ್ಯೆ ಮಾಡಿದೆ ಎನ್ನುವುದನ್ನು ದೃಢಪಡಿಸಿತ್ತು. ಇದಕ್ಕೆ ಕಾರಣರಾದವರನ್ನು ಹತ್ಯೆ ಮಾಡುವವರೆಗೆ ಇಸ್ರೇಲ್ ವಿಶ್ರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ  ಬೆಂಜಮಿನ್ ನೆತನ್ಯಾಹು (Benjamin Netanyahu) ಗುಡುಗಿದ್ದಾರೆ.

https://x.com/jacksonhinklle/status/1830322903721869313

ಸುಮಾರು ಎರಡು ಮೂರು ತಿಂಗಳ ಹಿಂದೆ ಹಮಾಸ್‌ ಉಗ್ರರು ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಇಸ್ರೇಲ್‌ ಪ್ರಜೆಗಳನ್ನು ರಕ್ಷಿಸಲಾಗಿತ್ತು. ಇಸ್ರೇಲ್‌ ರಕ್ಷಣಾ ಪಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಾಲ್ವರನ್ನು ರಕ್ಷಿಸಿ ತಮ್ಮ ದೇಶಕ್ಕೆ ಮರಳಿ ತರುವಲ್ಲಿ ಯಶಸ್ವಿಯಾಗಿತ್ತು. ದುರಾದೃಷ್ಟವಶಾತ್‌ ಈ ರಕ್ಷಣಾ ಕಾರ್ಯಾಚಣೆ ವೇಳೆ ಒಬ್ಬ ಇಸ್ರೇಲ್‌ ಯೋಧ ಹುತಾತ್ಮನಾಗಿದ್ದರು.ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮನಿ (25 ವರ್ಷ), ಅಲ್ಮೋಗ್‌ ಮೀರ್‌ ಜಾನ್‌ (21 ವರ್ಷ), ಆಂಡ್ರೆ ಕೊಜ್ಲೋವ್‌ (27 ವರ್ಷ) ಹಾಗೂ ಶ್ಲೋಮಿ ಝಿವ್‌ (40 ವರ್ಷ) ಎಂದು ಗುರುತಿಸಲಾಗಿದೆ. ಇವರನ್ನು ಹಮಾಸ್‌ ಉಗ್ರರು 2023ರ ಅಕ್ಟೋಬರ್‌ 7ರಂದು ಸೂಪರ್ನೋವಾ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಅಪಹರಿಸಿಕೊಂಡು ಹೋಗಿರುವುದಾಗಿ ದ ಟೈಮ್ಸ್‌ ಆಫ್‌ ಇಸ್ರೇಲ್‌ ವರದಿ ಮಾಡಿದೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಹಮಾಸ್ ಉಗ್ರಗಾಮಿಗಳು ಸುಮಾರು 1,200 ಜನರನ್ನು ಹತ್ಯೆಗೈದು ಸುಮಾರು 250 ಮಂದಿಯನ್ನು ಅಪಹರಿಸಿದ ಬಳಿಕ ಇಸ್ರೇಲ್‌-ಪ್ಯಾಲಸ್ತೀನ್‌ ಯುದ್ಧ ಆರಂಭವಾಗಿತ್ತು. ಅಂದಿನಿಂದ ಕನಿಷ್ಠ 40,738 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.