Sunday, 15th December 2024

ಗುಂಡಿನ ದಾಳಿಯಲ್ಲಿ ತೆಲಂಗಾಣ ನ್ಯಾಯಾಧೀಶರ ಮಗಳ ಸಾವು

ಹೂಸ್ಟನ್ (ಅಮೆರಿಕ) : ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಯುವತಿ ಸಾವನ್ನಪ್ಪಿದ್ದಾರೆ.

ಟೆಕ್ಸಾಸ್‌ನ ಡಲ್ಲಾಸ್‌ನಿಂದ ಉತ್ತರಕ್ಕಿರುವ 25 ಕಿಲೋಮೀಟರ್ ದೂರದಲ್ಲಿರುವ ಅಲೆನ್ ಪ್ರೀಮಿಯರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯಗೊಂಡಿ ದ್ದರು. ತೆಲಂಗಾಣದ ತಾಟಿಕೊಂಡ ಐಶ್ವರ್ಯಾ ಅವರೂ ಕೂಡ ಈ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಐಶ್ವರ್ಯಾ ಅವರ ತಂದೆ ನರಸಿರೆಡ್ಡಿ ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾ ಧೀಶರಾಗಿ ಕೆಲಸ ಮಾಡುತ್ತಿದ್ದಾರೆ. ಶಾಪಿಂಗ್​ ಮಾಲ್​ಗೆ ತೆರಳಿದ್ದಾಗ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿ ಅಂಗಡಿಗಳ ಹೊರಗಿನಿಂದ ಗುಂಡಿನ ದಾಳಿ ನಡೆಸಿದ್ದ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿದ್ದರು.

ಆರೋಪಿ ಸಾವನ್ನಪ್ಪಿದ ಬಳಿಕ ಸ್ಥಳಕ್ಕಾಗಮಿಸಿದ ಆಯಂಬುಲೆನ್ಸ್​ ಸಿಬ್ಬಂದಿ ಗಾಯಾಳು ಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುಗಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಟೆಕ್ಸಾಸ್‌ನ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಗುಂಡಿನ ಚಕಮಕಿ ವೇಳೆ ನೂರಾರು ಜನರು ಓಡಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಹೆದರಿ ಅಲ್ಲೇ ಅಡಗಿಕೊಂಡಿದ್ದರು.